ಭಾರತ ಮೊದಲ ಶಿಕ್ಷಕಿ ,ಆಧುನಿಕ ಶಿಕ್ಷಣದ ತಾಯಿ ಅಕ್ಷರದವ್ವ ಮಾತೆ ಸಾವಿತ್ರಿ ಫುಲೆ..
ಆರಂಭವಾದ ಶಾಲೆಗಳ ಚಳವಳಿಯ ಪರಿಣಾಮ 1848 ರಿಂದ 1852 ರ ಅವಧಿಯಲ್ಲಿ 18 ಶಾಲೆಗಳನ್ನು ಆರಂಭಿಸುತ್ತಾರೆ. ಕೇವಲ 14 ವರ್ಷದಲ್ಲಿ 18 ಶಾಲೆಗಳನ್ನು ತೆರೆದು ಒಂದು ಶಿಕ್ಷಣ ಕ್ರಾಂತಿಯನ್ನೆ ಮಾಡುತ್ತಾರೆ

ಮನುಷ್ಯ ಇತಿಹಾಸದ ತಪ್ಪುಗಳನ್ನು ತಿದ್ದಿಕೊಳ್ಳಲು ಅಕ್ಷರವನ್ನು ಮಾತ್ರ ಕಲಿತರೆ ಸಾಲದು, ಆತ ಅರಿವನ್ನು ಕೂಡ ಬೆಳೆಸಿಕೊಳ್ಳಬೇಕು.
ಅಂತಹದ್ದೊಂದು ಅರಿವಿಗೆ ಸಾಕ್ಷಿಯಾಗಿ ಮೊನ್ನೆ ಶಿಕ್ಷಣ ಇಲಾಖೆ ಒಂದು ಮಹತ್ತರವಾದ ತೀರ್ಮಾನವನ್ನು ತೆಗೆದುಕೊಂಡು, ಸಾವಿತ್ರಿ ಬಾ ಫುಲೆ ಅವರ ಜಯಂತಿಯನ್ನು, ಪ್ರತಿ ಶಾಲಾ, ಕಾಲೇಜುಗಳಲ್ಲಿ ಆಚರಣೆ ಮಾಡಿ, ಇವರ ಜೀವನ ಚರಿತ್ರೆಯ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸಬೇಕೆಂದಿರವುದು ಶ್ಲಾಘನೀಯ. ನೂರ ಐವತ್ತು ವರ್ಷಗಳ ನಂತರ ತಡವಾಗಿ ಮಕ್ಕಳ ತಲೆಯೊಳಗೆ ಸಾವಿತ್ರಿಯವರು ಪ್ರವೇಶಿಸುತ್ತಿರುವುದೆನೊ ಸರಿ. ಆದರೆ ಅವರ ಪ್ರವೇಶ ಹೇಗಿರಬೇಕೆಂಬುದು ಈಗ ಯೋಚಿಸಬೇಕಾದ ವಿಚಾರ. ಯಾಕೆಂದರೆ ಈ ಸುತ್ತೋಲೆ ಹೊರಡಿಸಿದಾಗಿನಿಂದ ಮಾರುಕಟ್ಟೆಯಲ್ಲಿ ಸಾವಿತ್ರಿ ಬಾ ಅವರ ಫೋಟೋಗೆ ಬಹು ಬೇಡಿಕೆ ಆರಂಭವಾಗಿದೆ. ಆ ಭಾವಚಿತ್ರ ಸಿಗದೆ ಶಿಕ್ಷಕರು ಮಾರುಕಟ್ಟೆಯಲ್ಲಿ ಅಲೆದಾಡುವಂತಾಗಿದೆ. ಇದರ ಅರ್ಥ; ಸಾವಿತ್ರಿ ಬಾ ರವರ ಭಾವಚಿತ್ರ ಈ ಮೊದಲು ಆ ಶಾಲೆ, ಕಾಲೇಜು ಗಳಲ್ಲಿ ಇರಲಿಲ್ಲ ಎಂಬುದು ವಾಸ್ತವ. ಇದುವರೆಗೆ ಇವರ ಫೋಟೋವನ್ನೇ ಪರಿಚಯಿಸಿದ ನಾವು, ಅವರ ಜೀವನ ಚರಿತ್ರೆಯನ್ನು ಎಲ್ಲಿಂದ ಆರಂಭಿಸುವುದು ? ಅವರ ಬದುಕನ್ನು ಅವರ ಪತಿ, ಜ್ಯೋತಿ ಬಾ ರೊಂದಿಗೆ ಸೇರಿಸಿ ಮಾತನಾಡಲು ಹೊರಟರೆ ಈ ಸುತ್ತೋಲೆಯ ಆಶಯ ಈಡೇರಲಾರದು ಎನಿಸುತ್ತದೆ. ಯಾಕೆಂದರೆ ಸಾವಿತ್ರಿ ಬಾ ಹೋರಾಟದ ಬದುಕಿಗೆ ಈ ನೆಲದಲ್ಲಿ ಬಹುದೊಡ್ಡ ಪ್ರತ್ಯೇಕತೆಯಿದೆ. ಅದು ಜ್ಯೋತಿ ಬಾ ರವರ ಚರಿತ್ರೆ ಯಷ್ಟೇ ವ್ಯಾಪಕವಾಗಿದೆ.
ಪತ್ರಕರ್ತೆ ಮೃದು ವರ್ಮಾ ” ಇಂದು ಫ್ಯಾಷನ್ ಆಗಿರುವ ಸ್ತ್ರೀ ವಿಮೋಚನೆ, ನೂರ ಐವತ್ತು ವರ್ಷಗಳ ಹಿಂದೆ ಭಾರತದ ಐಕಾನ್ ಆಗಿದ್ದ ಸಾವಿತ್ರಿ ಬಾಯಿಯವರಿಗೆ ಮಹಿಳಾ ಶೋಷಣೆಯ ನಿಜವಾದ ಅರ್ಥದ ಅರಿವಾಗಿತ್ತು” ಎಂದು ಬರೆಯುತ್ತಾರೆ.
ಥಾಮಸ್ ವೂಲ್ಫ್ ಮತ್ತು ಸಂಜನ್ ಆಂಡ್ರೇಡ್ ಎಂಬ ತತ್ವಶಾಸ್ತ್ರಜ್ಞ ” ಆಧುನಿಕ ಶಿಕ್ಷಣದ ತಾಯಿ, ಸಾವಿತ್ರಿ ಬಾ ಪುಲೆಗೆ ನೀನು ಚಿರಋುಣಿ ಆಗಿರಬೇಕು. ಆದರೆ ನಿನಗೆ ಆಕೆಯ ಪರಿಚಯವಿದೆಯೇ ? ನೀನು ಓದು ಬರಹ ಕಲಿತ ಮಹಿಳೆಯಾಗಿದ್ದರೆ ಆಕೆಗೆ ಋುಣಿಯಾಗಿರಬೇಕು. ನೀನು ಶಿಕ್ಷಿತ ಭಾರತೀಯ ಮಹಿಳೆಯಾಗಿದ್ದರೆ, ಆಕೆಗೆ ನೀನು ಋಣಿಯಾಗಿರಬೇಕು. ನೀನು ಭಾರತೀಯ ಶಾಲಾ ಬಾಲಕಿ ಯಾಗಿದ್ದು ಅಧ್ಯಯನವನ್ನು ಇಂಗ್ಲಿಷ್ ನಲ್ಲಿ ಓದುತ್ತಿದ್ದರೆ, ಆಕೆಗೆ ನೀನು ಋುಣಿಯಾಗಿರಬೇಕು. ನೀನು ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಿತ ದೇಸಿ ಮಹಿಳೆಯಾಗಿದ್ದರೆ ಆಕೆಗೆ ನೀನು ಋುಣಿಯಾಗಿರಬೇಕು” ಎಂದು ಬರೆಯುತ್ತಾರೆ.
ವಿದೇಶಿ ಫಿಲಾಸಫರ್ ಒಬ್ಬರು ಭಾರತೀಯ ಮಹಿಳೆಯೊಬ್ಬರ ಬಗ್ಗೆ, ಭಾರತೀಯ ಮಹಿಳೆಯರಿಗೆ ಹೇಳುತ್ತಿರುವ ಮಾತಿದು. ಈ ಮಾತುಗಳನ್ನು ಗಮನಿಸಿದರೆ ಭಾರತೀಯ ಶಿಕ್ಷಣ ವ್ಯವಸ್ಥೆ ಮತ್ತು ಭಾರತೀಯ ಮಹಿಳಾ ಹೋರಾಟದ ಮೊದಲ ಹೆಜ್ಜೆ ಗುರುತುಗಳು ಸಾವಿತ್ರಿ ಬಾಫುಲೆ. ಹಾಗಾದರೆ ಸ್ತ್ರೀ ಕೇವಲ ಮಕ್ಕಳನ್ನು ತಯಾರು ಮಾಡುವ ಕಾರ್ಖಾನೆ. ಅವಳು ಸ್ವಾತಂತ್ರ್ಯಕ್ಕೆ ಅರ್ಹಳಲ್ಲ. ಗಂಡ ಸತ್ತ ನಂತರ ಆಕೆ ರೂಪಿಣಿಯಾಗಿ ರಬಾರದು. ಕೇಶರಾಶಿಯನ್ನು ತೆಗೆಯಬೇಕು. ಬಾಲ್ಯದಲ್ಲಿ ತಂದೆ ತಾಯಿಯ ಆಶ್ರಯದಲ್ಲಿ, ಯೌವನದಲ್ಲಿ ಗಂಡನ ಆಶ್ರಯದಲ್ಲೂ, ಹಾಗೂ ಮುಪ್ಪಿನ ಕಾಲದಲ್ಲಿ ಮಕ್ಕಳ ಆಶ್ರಯದಲ್ಲೂ’ ಬದುಕಬೇಕೆಂಬ ಅನಿಷ್ಠ ಸಂಪ್ರದಾಯ ವ್ಯವಸ್ಥೆಯನ್ನು ಸಾವಿತ್ರಿಬಾಯಿಯವರು ಮೆಟ್ಟಿ ನಿಂತಿದ್ದು ಭಾರತೀಯ ಸ್ತ್ರೀ ಕುಲದ ವಿಮೋಚನೆಗೆ ಸಂಬಂಧಿಸಿದ ಹೋರಾಟದಲ್ಲಿ ಬಹುದೊಡ್ಡ ಮೈಲುಗಲ್ಲಾಗಿದೆ.
194 ವರ್ಷಗಳ ಹಿಂದೆ ದಮನಿತ ಸಮುದಾಯಗಳಿಗೆ ಆಧುನಿಕ ಶಿಕ್ಷಣವನ್ನು ಕೊಟ್ಟಂತಹ ಮೊದಲ ಶಿಕ್ಷಕಿ ಮಾತೆ ಸಾವಿತ್ರಿ ಬಾಫುಲೆ. 1831 ಜನವರಿ 03ರಲ್ಲಿ ಮಹಾರಾಷ್ಟ್ರದ ಸತಾರ ಜಿಲ್ಲೆಯ ನಯಗಾಂವ್ ನಲ್ಲಿ ಜನಿಸಿ, ಒಂಬತ್ತು ವರ್ಷಕ್ಕೇ ಮದುವೆಯಾದ ಇವರು ಆಧುನಿಕ ಫೆಮಿನಿಸಂನ ತಾಯಿಯೆಂದು ಗುರುತಿಸಲ್ಪಡುತ್ತಾರೆ. ಮಹಿಳೆಯರ ಹಕ್ಕುಗಳಿಗಾಗಿ ನಿರಂತರವಾಗಿ ಚಳವಳಿಗಳನ್ನು ಸಂಘಟಿಸಿದ ಸಾವಿತ್ರಿ ಬಾಯಿ 1848 ರಲ್ಲಿ ಪುಣೆಯ ನಾರಾಯಣ ಪೇಟೆಯ ಬಿಂದೇ ವಾಪದಲ್ಲಿ ಪತಿ ಜ್ಯೋತಿ ಬಾ ರೊಂದಿಗೆ ಕೈಜೋಡಿಸಿ ಮೊದಲ ಬಾರಿಗೆ ಬಾಲಕಿಯರ ಶಾಲೆಯನ್ನು ಆರಂಭಿಸಿದರು. 1851 ರ ವೇಳೆಗೆ ಇವರು ಸ್ಥಾಪಿಸಿದ ಶಾಲೆಗಳ ಸಂಖ್ಯೆ ಮೂರಕ್ಕೆರುತ್ತದೆ. ವಿದ್ಯಾರ್ಥಿಗಳ ಸಂಖ್ಯೆ ಐನೂರಕ್ಕೆ ದಾಟುತ್ತದೆ. ಇಂದು ಸರ್ವ ಶಿಕ್ಷಣ ಅಭಿಯಾನ, ಶಿಕ್ಷಣ ಹಕ್ಕು ಕಾಯಿದೆ , ಬಿಸಿಯೂಟದ ಸರ್ಕಾರಿ ಯೋಜನೆಗಳನ್ನು ಕ್ರಾಂತಿಕಾರಿ ಯೋಜನೆಗಳೆಂದು ಗಳೆಂದು ಕೊಂಡಾಡಲಾಗುತ್ತದೆ. ಆದರೆ 150 ವರ್ಷಗಳ ಹಿಂದೆಯೇ ಶಾಲೆಯನ್ನು ತೊರೆಯದ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಯೋಜನೆ ಜಾರಿಗೆ ತಂದಿದ್ದರು. ಸ್ಪರ್ಧೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನದ ಬದಲು ಗ್ರಂಥಗಳನ್ನು ವಿತರಿಸುತ್ತಿದ್ದರು. ಪೋಷಕರು ಮತ್ತು ಶಿಕ್ಷಕರ ನಡುವೆ ನಿಯಮಿತವಾಗಿ ಮಾತುಕತೆಗಳನ್ನು ಆ ಕಾಲದಲ್ಲಿಯೇ ಜಾರಿಗೊಳಿಸಿದರು.1852 ರಲ್ಲಿ ಪುಣೆಯ “ಮಹಿಳಾ ಮಂಡಳಿಯನ್ನು” ಸ್ಥಾಪಿಸಿ ಎಲ್ಲಾ ವರ್ಗದ ಮಹಿಳೆಯರನ್ನು ಜಾಗೃತಿ ಗೊಳಿಸುತ್ತಿದ್ದರು ಮತ್ತು ಫ್ಯೂಡಲ್ ಯಜಮಾನತ್ವವನ್ನು ತೀವ್ರವಾಗಿ ಟೀಕಿಸುತ್ತಿದ್ದರು. ವರದಕ್ಷಿಣೆ ಪಿಡುಗು ತಡೆಯಲು ಸರಳ ವಿವಾಹ ಏರ್ಪಡಿಸುತ್ತಿದ್ದರು. ಬರಗಾಲದ ಸಂದರ್ಭದಲ್ಲಿ ದಲಿತರಿಗೆ ತಮ್ಮ ಮನೆಯ ಬಾವಿಯನ್ನು ಬಿಟ್ಟುಕೊಟ್ಟರು. ಕ್ಷಾಮದಿಂದ ತತ್ತರಿಸಿದ ಜನಕ್ಕಾಗಿ “ವಿಕ್ಟೋರಿಯಾ ಬಾಲ ಶ್ರಮ” ಸ್ಥಾಪಿಸಿ, ಸ್ವತಃ ತಾವೇ ಬೀದಿ ಬೀದಿಗಳಲ್ಲಿ ನೆರವಿಗಾಗಿ ನಿಂತರು. ಪತಿ ಜ್ಯೋತಿಬಾಪುಲೆ ತೀರಿಕೊಂಡಾಗ ಸ್ವತಃ ತಾವೇ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದು , ಅಂದಿನ ಸಂಪ್ರದಾಯಸ್ಥ ರಿಂದ ಟೀಕೆಗೆ ಗುರಿಯಾಯಿತು. ವಿವಾಹ ಬಾಹಿರ ಗರ್ಭಿಣಿ ಸ್ತ್ರೀಯರಿಗಾಗಿ ” ಪುನರ್ ವಸತಿ ಕೇಂದ್ರ” ವಿವಾಹ ಬಾಹಿರ ಮಕ್ಕಳಿಗೆ “ಶಿಶು ಕೇಂದ್ರ” ಕ್ಷೌರಿಕರನ್ನು ಸಂಘಟಿಸಿ ವಿಧವೆಯರ ಕೇಶ ಮಂಡನೆಯನ್ನು ವಿರೋಧಿಸಿದರು. ಇದೆಲ್ಲವನ್ನೂ ಸಹಿಸದ ಸಮಾಜದಿಂದಲೂ ಮತ್ತು ಮನೆಯಿಂದಲೂ ಅವರು ಬಹಿಷ್ಕಾರ ಗೊಂಡರು. ಆದರೂ ಅವರು ಎದೆಗುಂದಲಿಲ್ಲ 1857 ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿದ್ದಾಗ ಸ್ವತಃ ತಮಗೆ ಪ್ಲೇಗ್ ಬಂದು ಮರಣಿಸಿದರು.
ಸ್ವತಃ ಕವಯಿತ್ರಿ ಯಾಗಿದ್ದ ಸಾವಿತ್ರಿ ಬಾಪುಲೆ ರವರು “ಕಾವ್ಯ ಅರಳಿದೆ” ಎಂಬ ಕಾವ್ಯ, “ಅಪ್ಪಟ ಮುತ್ತುಗಳ ಸಾಗರ” ಎಂಬ ಕೃತಿ ರಚಿಸಿ ಜ್ಞಾನವೆನ್ನುವುದು ಬಡವರ ನೆರಳು, ಆಶ್ರಯ ತಾಣ, ಇದು ತಾಯ್ತನ ಸ್ವರೂಪಿ, ಎಂದು ಜ್ಞಾನದ ಮಹಿಮೆಯನ್ನು ಹೇಳುತ್ತಾ, ಬಲಿ ಚಕ್ರವರ್ತಿಯ ಸಾವಿನಲ್ಲಿ ಭಾರತದ ನೋವುಗಳು ಅಡಗಿದೆ, ಎಂದು ಚಿಂತಿಸಿ, ಇಂಗ್ಲಿಷ್ ಶಿಕ್ಷಣವನ್ನು ಅಂದೇ ಪ್ರತಿಪಾದಿಸಿದ್ದರು. ಇವರ ಶಾಲೆಯಲ್ಲಿ ಕಲಿತ “ಮುಕ್ತಾಬಾಯಿ” ಎಂಬ 11 ವರ್ಷದ ಹೆಣ್ಣು ಮಗಳ ಪ್ರಬಂಧವೊಂದು ಇಂದಿಗೂ ಕ್ರಾಂತಿಕಾರಕ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸುವಂತಿದೆ. ಇಂತಹ ಕ್ರಾಂತಿಗಳು ಭಾರತದಂತಹ ನೆಲದಲ್ಲಿ ನಡೆದಿದ್ದರೂ ಇಂದೂ ಕೂಡ ಅಮಾಯಕ ಸ್ತ್ರೀ ಶೋಷಣೆ ನಡೆಯುತ್ತಿದೆ. ರಾಜಕಾರಣಿಗಳು ಪಟ್ಟಭದ್ರಹಿತಾಸಕ್ತಿಗಳು ಹೆಣ್ಣನ್ನು ಹೈಜಾಕ್ ವಸ್ತುವಾಗಿ ಬಳಸಿಕೊಳ್ಳುತ್ತಿದ್ದಾರೆ. ಇಂದಿಗೂ ಹಳ್ಳಿಗಳಲ್ಲಿ ಮುಟ್ಟಾದ ಸ್ತ್ರೀ ಮೂರು ದಿನ ಮನೆಯಿಂದ ಹೊರ ನಿಲ್ಲಬೇಕಿದೆ. ಗಂಡನನ್ನು ಕಳೆದುಕೊಂಡ ಹೆಣ್ಣು ಮಕ್ಕಳಿಗೆ ಮುಕ್ತ ಸ್ವಾತಂತ್ರ್ಯವಿಲ್ಲ. ಹೆಣ್ಣು ಭ್ರೂಣ ಹತ್ಯೆ ಅತ್ಯಧಿಕವಾಗಿದೆ. ಕಚೇರಿಗಳಲ್ಲಿ ಸ್ತ್ರೀ ಶೋಷಣೆ ತಾಂಡವವಾಡುತ್ತಿರುವ ಈ ಸಂದರ್ಭದಲ್ಲಿ ಸಾವಿತ್ರಿ ಬಾಫುಲೆ ಇಲ್ಲಿ ಮತ್ತೊಮ್ಮೆ ಸ್ತ್ರೀವಾದದ ಜೀವಸೆಲೆ ಯಾಗಬೇಕಾಗಿದೆ.
ಒಂದು ಅಸಾಧ್ಯ ದಾಂಪತ್ಯ ಧರ್ಮವನ್ನ ಜ್ಯೋತಿ ಬಾಪುಲೆ ಮತ್ತು ಸಾವಿತ್ರಿ ಬಾಪುಲೆ ನಿರ್ವಹಿಸಿದ್ದರು. ಸಾಮಾಜಿಕ ಕಳಕಳಿ ಮತ್ತು ಬದ್ಧತೆ ಅವರ ಬದುಕಿನ ಒಳ ಹೊರಗನ್ನು ಪೋಷಿಸಿದ ಜೀವದ್ರವ್ಯ ವಾಗಿತ್ತು. ಮಕ್ಕಳನ್ನು ಹಡೆಯದೆ ತಮ್ಮನ್ನು ತಾವು ಸಮಾಜ ಸೇವೆಗೆ ಮುಡಿಪಾಗಿಸಿ ಕೊಂಡು ವಿಧವೆಯ ಮಗನೊಬ್ಬನನ್ನು ದತ್ತು ಪುತ್ರನಾಗಿ ಪಡೆದರು. ಅವರು ತೆರೆದಿಟ್ಟ ಶಿಕ್ಷಣ ಎಂಬ ಕಿಟಕಿ ಬಾಗಿಲುಗಳಿಂದ ಹೊಸ ಅರಿವಿನ ಸ್ಪರ್ಶ ಸ್ತ್ರೀ ಕುಲದ ವ್ಯಕ್ತಿತ್ವವನ್ನು ಸ್ವತಂತ್ರವಾಗಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಇಂತಹ ಅಪೂರ್ವ ಹೆಣ್ಣುಮಗಳೊಬ್ಬಳನ್ನು “ಆಧುನಿಕ ಭಾರತದ ಮೊದಲ ಶಿಕ್ಷಕಿ” . ಆದರೆ ಭಾರತದ ಚರಿತ್ರೆ ಇವರಿಗೆ ಸಲ್ಲಬೇಕಾದ ಗೌರವವನ್ನು ನೀಡದಿರುವುದು ವಿಪರ್ಯಾಸ. ಆದರೆ ಕರ್ನಾಟಕ ಸರ್ಕಾರ ಹಾಗೂ ತೆಲಂಗಾಣ ಸರ್ಕಾರ ಸಾವಿತ್ರಿ ಬಾಪುಲೆಯವರ ಹೆಸರಿನಲ್ಲಿ ಕಾರ್ಯಕ್ರಮವನ್ನು ರೂಪಿಸಿರುವುದು ನಾಡಿನ ಸ್ತ್ರೀ ಕುಲಕ್ಕೆ ಶೋಭೆಯನ್ನುಂಟು ಮಾಡಿದೆ.
1848 ಭಾರತದ ಶೈಕ್ಷಣಿಕ ಇತಿಹಾಸದಲ್ಲಿ ಚಾರಿತ್ರಿಕ ವರ್ಷವಾಗಿದೆ. ಜೋತಿಬಾ ಮತ್ತು ಸಾವಿತ್ರಿಬಾಯಿ ಜೊತೆಗೂಡಿ ಜನವರಿ 1, 1848 ರಲ್ಲಿ ಪುಣೆಯ ಭಿಡೆವಾಡದಲ್ಲಿ ಆರಂಭಿಸಿದ ಭಾರತೀಯರೆ ಆರಂಭಿಸಿದ ಮೊದಲ ಹುಡುಗಿಯರ ಶಾಲೆ ಆರಂಭವಾಗುತ್ತದೆ. ಅಂತೆಯೇ ಮೇ 15 ರಂದು ಮಹರ್ ವಾಡದಲ್ಲಿ ಶೂದ್ರರಿಗಾಗಿ ಭಾರತೀಯರೇ ಆರಂಭಿಸಿದ ಮೊದಲ ಶಾಲೆ ಆರಂಭವಾಗುತ್ತದೆ. ಹೀಗೆ ಮಹಿಳೆಯರಿಗೆ ಮತ್ತು ದಲಿತರಿಗೆ ಅಕ್ಷರ ಕಲಿಸುವುದೇ ಅಪರಾಧ ಎಂದು ಪುರೋಹಿತಶಾಹಿಗಳು ದೊಡ್ಡದಾಗಿ ಪ್ರತಿರೋಧ ಒಡ್ಡುತ್ತಾರೆ. ಜ್ಯೋತಿಬಾ ತಂದೆ ಗೋವಿಂದ ರಾವ್ ಅವರಿಗೆ ಜಾತಿಯಿಂದ, ಧರ್ಮದಿಂದ ಬಹಿಷ್ಕಾರ ಹಾಕುವುದಾಗಿ ಬೆದರಿಸುತ್ತಾರೆ. ಈ ಬೆದರಿಕೆಗೆ ಹೆದರಿದ ಗೋವಿಂದರಾವ ಅಕ್ಷರ ಕಲಿಸುವ ಪಾಪ ಕಾರ್ಯವನ್ನು ಬಿಡುವುದಿಲ್ಲವಾದರೆ ಮನೆಯನ್ನು ತೊರೆಯಬೇಕಾಗುತ್ತದೆ ಎಂದು ಮಗ ಸಶಿಕ್ಷಣಾಧಿಕಪತ್ರ ಕುತ್ತಾರೆ. ವಾಗ್ವಾದ ನಡೆದು ಕೊನೆಗೆ ನಾವು ಅಕ್ಷರ ಕಲಿಸುವ ಪುಣ್ಯ ಕೆಲಸದಿಂದ ಹಿಂದೆ ಸರಿಯುವುದಿಲ್ಲ ಎಂದು ಮನೆಯಿಂದ ಹೊರಬೀಳುತ್ತಾರೆ. ಸಾಕುತಾಯಿ ಸುಗುಣಾಬಾಯಿ ಮುನ್ಷಿ ಗಫಾರ್ ಖಾನ್ ಅವರಿಗೆ ಈ ವಿಷಯ ತಿಳಿಸುತ್ತಾರೆ. ಹೀಗೆ ಬೀದಿಗೆ ಬಿದ್ದ ಜ್ಯೋತಿಬಾ ಮತ್ತು ಸಾವಿತ್ರಿಬಾಯಿಗೆ ಉಸ್ಮಾನ್ ವಾಡದ ಉಸ್ಮಾನ್ ಶೇಕ್ ಮತ್ತು ಪಾತೀಮಾ ಶೇಕ್ ಅಣ್ಣ ತಂಗಿ ವಸತಿಕೊಟ್ಟು ನೆರವಾಗುತ್ತಾರೆ. ಮುಂದೆ ಪಾತೀಮಾಶೇಕ್ ಕೂಡ ಜ್ಯೋತಿಬಾ ಆರಂಭಿಸಿದ ಶಾಲೆಗಳಲ್ಲಿ ಸಾವಿತ್ರಿ ಬಾಯಿ ಜತೆ ಶಿಕ್ಷಕಿಯಾಗಿಯೂ ದುಡಿಯುತ್ತಾಳೆ ಆ ಮೂಲಕ ಪಾತೀಮಾಶೇಕ್ ಭಾರತದ ಮೊದಲ ಮುಸ್ಲಿಂ ಶಿಕ್ಷಕಿಯಾಗಿ ಚರಿತ್ರೆಯಲ್ಲಿ ದಾಖಲಾಗುತ್ತಾರೆ.
ಹುಡುಗಿಯರಿಗಾಗಿ, ಶೂದ್ರರಿಗಾಗಿ ತೆರೆದ ಶಾಲೆಗಳನ್ನು ನಿಲ್ಲಿಸುವುದಕ್ಕಾಗಿ ಸಂಪ್ರದಾಯಸ್ಥ ಸನಾತನಿ ಬ್ರಾಹ್ಮಣರು ಪ್ರಭಲ ತಡೆಯೊಡ್ಡುತ್ತಾರೆ. ಮೊದಲ ಹುಡುಗಿಯರ ಶಾಲೆಗೆ ಜಾಗ ಕೊಟ್ಟ ಚಿತ್ಪಾವಣ ಬ್ರಾಹ್ಮಣ ತಾತ್ಯಾಸಾಹೇಬ್ ಭಿಡೆ ಅವರಿಗೆ ಜೀವಬೆದರಿಕೆ ಒಡ್ಡಲಾಗುತ್ತದೆ, ಭಿಡೆಯವರು ಈ ಬೆದರಿಕೆಗೆ ಹೆದರದೆ ದೃಢವಾಗಿ ನಿಲ್ಲುತ್ತಾರೆ. ಸಾವಿತ್ರಿಬಾಯಿ ಶಾಲೆಗೆ ಪಾಠಕ್ಕೆ ತೆರಳುವ ಮಾರ್ಗಮಧ್ಯದಲ್ಲಿ ಸೆಗಣಿ ಎಸೆಯುವುದು, ಕಲ್ಲು ತೂರುವುದು ಮಾಡುತ್ತಾರೆ ಇದನ್ನು ಅರಿತ ಜ್ಯೋತಿಬಾ ಅವರ ಕ್ರಾಂತಿಗುರು ಲಾಹೂಜಿ ಸಾಳ್ವೆ ತಮ್ಮ ಗರಡಿಮನೆಯ ನಾಲ್ಕು ಪೈಲ್ವಾನರನ್ನು ಸಾವಿತ್ರಿಬಾಯಿಗೆ ಅಂಗರಕ್ಷಕರಾಗಿ ನೇಮಿಸುತ್ತಾರೆ.
ಹೀಗೆ ಆರಂಭವಾದ ಶಾಲೆಗಳ ಚಳವಳಿಯ ಪರಿಣಾಮ 1848 ರಿಂದ 1852 ರ ಅವಧಿಯಲ್ಲಿ 18 ಶಾಲೆಗಳನ್ನು ಆರಂಭಿಸುತ್ತಾರೆ. ಕೇವಲ 14 ವರ್ಷದಲ್ಲಿ 18 ಶಾಲೆಗಳನ್ನು ತೆರೆದು ಒಂದು ಶಿಕ್ಷಣ ಕ್ರಾಂತಿಯನ್ನೆ ಮಾಡುತ್ತಾರೆ. ಹಾಗೆ ಸ್ಥಾಪನೆಯಾದ 18 ಶಾಲೆಗಳು ಹೀಗಿವೆ:
1. ಭಿಡೆವಾಡ-ಪುಣೆ (01.01.1848)
2. ಮಹರ್ ವಾಡ, ಪುಣೆ (15.05.1848)
3. ಹಪಡ್ ಸರ್,ಪುಣೆ (01.09.1848)
4.ಓತೂರು,ಪುಣೆ (05.12.1848)
5. ಸಾಸ್ ವಾಡ, ಪುಣೆ (20.12.1848)
6. ಅಲ್ಲಾಟಾಚೆಘರ್-ಕಸಬಾ (01.07.1849)
7. ನಾಯಗಾಂವ್-ಖಂಡಾಲ – ಸತಾರ (15.07.1849)
8. ಶಿರ್ವಲ್-ಖಂಡಾಲ,ಸತಾರ (18.07.1849)
9. ತಲೇಗಾಂವ, ಠಮ್ ಠೇರ್(01.09.1849)
10. ಶಿರೂರು,ಪುಣೆ (08.09.1849)
11. ಮುಂಡವೆ, ಪುಣೆ(01.02.1850)
12. ಅಂಜೀರ್ವಾಡೆ – ಮಜಗಾಂವ್ (03.03.1850)
13. ಕರಂಜೆ, ಸತಾರ (06.03.1850)
14. ಬಿಂಗಾರ್, ಪುಣೆ(19.09.1850)
15. ಅಣ್ಣಾ ಸಾಹೇಬ್ ಚಿಪ್ಪೂನ್ಕರ್ವಾಡ – ಪುಣೆ (03.07.1851)
16.ರಸ್ತಾಪೇಟ್, ಪುಣೆ (17.09.1851)
17. ನಾನಾಪೇಟ್, ಪುಣೆ(15.03.1852)
18.ವೇತಲ್ ಪೇಟ್,ಪುಣೆ (15.03.1852)
ಹೀಗೆ ಮಹಿಳೆಯರಿಗೆ ಮತ್ತು ಶೂದ್ರರಿಗೆ ಶಿಕ್ಷಣ ಕೊಡುವುದನ್ನು ಕೆಲ ಬ್ರಿಟೀಷ್ ಅಧಿಕಾರಿಗಳು ಬೆಂಬಲಿಸಿದರೆ ಮತ್ತೆ ಕೆಲವರು ಈ ಬೆಳವಣಿಗೆ ಬ್ರಿಟೀಷ್ ಸಾಮ್ರಾಜ್ಯಶಾಹಿಗೆ ಕುತ್ತು ತರಬಹುದು ಎಂದು ಭಾವಿಸಿದ್ದರು. ಬ್ರಿಟೀಷ್ ಅಧಿಕಾರಿ ಲಾರ್ಡ್ ಲೆಬೆನ್ ಬರೋ’ ಹೀಗೆ ಕೆಳವರ್ಗಗಳಿಗೆ ಶಿಕ್ಷಣ ಕೊಟ್ಟರೆ ಅವರಲ್ಲಿ ಜಾಗೃತಿ ಮೂಡಿ ಮುಂದೆ ಬ್ರಿಟೀಷರ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ’ ಎಂದು ಬ್ರಿಟನ್ ರಾಣಿಗೆ ಪತ್ರ ಬರೆದು ಆತಂಕ ವ್ಯಕ್ತಪಡಿಸುತ್ತಾನೆ.
18 ಶಾಲೆಗಳನ್ನು ತೆರೆದು ಶಿಕ್ಷಣ ಕೊಡುತ್ತಿರುವ ಸಂದರ್ಭದಲ್ಲಿ ದೇಶ-ವಿದೇಶಿ ಪತ್ರಿಕೆಗಳಲ್ಲಿ ಈ ಶಾಲೆಗಳ ಶಿಕ್ಷಣ ಕ್ರಾಂತಿಯ ಬಗ್ಗೆ ಪರ-ವಿರೋಧದ ಚರ್ಚೆಗಳು ನಡೆಯುತ್ತವೆ. ಇದನ್ನೆಲ್ಲಾ ಗಮನಿಸಿದ ಪುಣೆ ಭಾಗದ ಬ್ರಿಟೀಶ್ ಶಿಕ್ಷಣಾಧಿಕಾರಿ ಸರ್ ಅಕ್ಸಿಕನ್ ಪೆರಿ ಅವರು ಮುನ್ಸೂಚನೆ ಇಲ್ಲದೆ ಶಾಲೆಗೆ ಬೇಟಿ ನೀಡುತ್ತಾರೆ. ಸಾವಿತ್ರಿಬಾಯಿ ಅವರನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಮಕ್ಕಳನ್ನು ಒಂದಷ್ಟು ಪ್ರಶ್ನಿಸಿ ಸಾವಿತ್ರಿಬಾಯಿ ಜತೆ ಮಾತನಾಡುತ್ತಾರೆ. ಆಗ ಅವರು ಜ್ಯೋತಿಬಾಪುಲೆ ಅವರಿಗೆ ‘ನಿಮ್ಮ ಹೆಂಡತಿಯ ವಿದ್ವತ್ತಿಗೆ ತಲೆಬಾಗುತ್ತೇನೆ. ಅವರ ಮರಾಠಿ ಮತ್ತು ಇಂಗ್ಲೀಷಿನ ಭಾಷಾ ಪಾಂಡಿತ್ಯವು ನನ್ನನ್ನು ಬೆರಗುಗೊಳಿಸಿದೆ. ನೀವು ಭಾಗ್ಯಶಾಲಿಗಳು. ಸರಕಾರ ಮಾಡಬೇಕಾದ ಕೆಲಸವನ್ನು ನೀವುಗಳು ಮಾಡಿದ್ದೀರಿ’ ಎಂದು ಹೊಗಳುತ್ತಾರೆ.
ಮುಂದೆ 20 ನವೆಂಬರ್ 1852 ರಲ್ಲಿ ಪುಣೆಯ ವಿಶ್ರಾಮ್ ಬಾಗ್ ನ ಪುಣೆ ಕಾಲೇಜು ಪರಿಸರದಲ್ಲಿ ಮುಂಬೈ ಪ್ರಾಂತ್ಯದ ಗವರ್ನರ್ ಲಾರ್ಡ್ ಸ್ಟುವರ್ಟ್ ಎಲ್ ಫಿನ್ ಸ್ಟನ್ ಅವರ ಉಪಸ್ಥಿತಿಯಲ್ಲಿ ಅಲ್ಲಿನ ಶಿಕ್ಷಣಾಧಿಕಾರಿ ಮೇಜರ್ ಕ್ಯಾಂಡಿ ಅವರ ಅಧ್ಯಕ್ಷತೆಯಲ್ಲಿ ಜೋತಿಬಾ ಮತ್ತು ಸಾವಿತ್ರಿಭಾಯಿ ಅವರಿಗೆ ನಾಗರಿಕ ಸನ್ಮಾನ ಮಾಡಲಾಗುತ್ತದೆ.
ಸನ್ಮಾನ ಸ್ವೀಕರಿಸಿ ಜ್ಯೋತಿಬಾ ಅವರು ‘ನಾನು ಅಂತಹ ವಿಶೇಷ ಕೆಲಸವನ್ನೇನು ಮಾಡಿಲ್ಲ. ನನ್ನ ಕರ್ತವ್ಯವವನ್ನು ನಿಭಾಯಿಸಿದ್ದೇನೆ ಅಷ್ಟೆ. ಸರಕಾರ ತನ್ನ ಇಚ್ಚಾಶಕ್ತಿಯಿಂದ ಸ್ತ್ರೀ ಶಿಕ್ಷಣ ದ ಸಮಸ್ಯೆಯನ್ನು ಬಗೆಹರಿಸಬೇಕು ಎನ್ನುತ್ತಾರೆ. ಮುಂದುವರಿದು ನಾನೇನೋ ಶಾಲೆಗಳನ್ನು ಸ್ಥಾಪಿಸಿದೆ. ಆದರೆ ನೂರು ಸಂಕಷ್ಟಗಳ ನಡುವೆ ಶಾಲೆಗಳಲ್ಲಿ ಕಲಿಸುವ ವ್ಯವಸ್ಥಿತ ಕೆಲಸ ಮಾಡಿದವರು ಸಾವಿತ್ರಿಬಾಯಿ ಹಾಗಾಗಿ ನಾನು ಸಾವಿತ್ರಿಬಾಯಿಗೆ ಅಭಿನಂದನೆ’ ಸಲ್ಲಿಸುತ್ತೇನೆ ಎನ್ನುತ್ತಾರೆ.
ಸಾವಿತ್ರಿಬಾಯಿ ಶಿಕ್ಷಣದ ಜೊತೆ ಜೊತೆಗೆ ಸಂಘಟನೆಯನ್ನು ಕಟ್ಟುತ್ತಾರೆ. ಜನವರಿ 14 1852 ರಲ್ಲಿ ಪುಣೆಯಲ್ಲಿ ‘ಮಹಿಳಾ ಸೇವಾ ಸಂಘ’ ವನ್ನು ಸ್ಥಾಪಿಸುತ್ತಾರೆ. ಇದರಲ್ಲಿ ಎಲ್ಲಾ ಜಾತಿ ಧರ್ಮದ ಮಹಿಳೆಯರು ಜಾತಿ ಧರ್ಮದ ಗಡಿದಾಟಿ ಒಂದಾಗಿಸಿ ಮಹಿಳಾ ಶಕ್ತಿಯನ್ನು ಏಕೀಕರಣ ಮಾಡುವ ಕನಸೊತ್ತಿದ್ದರು. ಈ ಸಂದರ್ಭದಲ್ಲಿ ‘ಅರಿಶಿನ ಕುಂಕುಮ’ ಎನ್ನುವ ಆಚರಣೆಯನ್ನು ಮುನ್ನಲೆಗೆ ತಂದರು. ಸಂಕ್ರಾಂತಿಯ ದಿನ ‘ಎಳ್ಳುಬೆಲ್ಲ’ ಎನ್ನುವ ಮತ್ತೊಂದು ಹೊಸ ಆಚರಣೆಯ ಚಾಲ್ತಿಗೆ ತರಲಾಯಿತು. ಈ ಸಂಘಕ್ಕೆ ಪುಣೆಯ ಜಿಲ್ಲಾಧಿಕಾರಿಯ ಪತ್ನಿ ಈ.ಸಿ.ಜೋನ್ಸ್ ಅಧ್ಯಕ್ಷರಾಗಿದ್ದರು. ಸಾವಿತ್ರಿಬಾಯಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು.
ಅಕ್ಷರ ಓದಲು ಬರೆಯಲು ಕಲಿತರಷ್ಟೇ ಸಾಲದು ಆ ಅಕ್ಷರ ಓದಿನ ಮೂಲಕ ಜ್ಞಾನದ ಹುಡುಕಾಟ ಮಾಡಬೇಕೆಂಬುದು ಜ್ಯೋತಿಭಾ ಕನಸಾಗಿತ್ತು. ಇದರ ಪ್ರತಿಫಲವಾಗಿ 1852 ರಲ್ಲಿ ‘ಪುಣೆ ಲೈಬ್ರರಿ’ ಯನ್ನು ಸ್ಥಾಪಿಸುತ್ತಾರೆ. ಇದರ ಫಲವಾಗಿ 1853 ರಲ್ಲಿ ಮುಕ್ತಾ ಸಾಳ್ವೆ ಎಂಬ ದಲಿತ ವಿದ್ಯಾರ್ಥಿನಿ ಗ್ರಂಥಾಲಯದ ಓದಿನ ಪರಿಣಾಮ ‘ಅಸ್ಪೃಶ್ಯರ ನೋವು’ ಎಂಬ ಲೇಖನ ಬರೆಯುತ್ತಾಳೆ. ಈ ಬರಹ ವಿಕ್ಟೋರಿಯಾ ರಾಣಿಯ ಗಮನಸೆಳೆಯುತ್ತದೆ.
ಜ್ಯೋತಿಬಾ ಅವರ ಸಾರ್ವತ್ರಿಕ ಶಿಕ್ಷಣ ಕನಸಿಗೆ ಬೆಂಗಾವಲಾಗಿ ನಿಂತವರನ್ನು ನೆನೆಯಬೇಕು. ಕ್ರಿಸ್ಚಿಯನ್ ಮತಧರ್ಮ ಪ್ರಚಾರಕ ರೆವರೆಂಡ್ ಲಿಂಜಿಟ್ ಸಾಹೇಬ್, ಮುಸ್ಲಿಂ ಮದರಸಾದ ಶಿಕ್ಷಕ ಗಫೂರ್ ಬೇಗ್ ಮುನ್ಷಿ, ಜೋತಿಬಾ ಸಹಪಾಟಿಗಳಾದ ಬ್ರಾಹ್ಮಣರಾದ ಸದಾಶಿವ ಬಲ್ಲಾಳ್ ಗೋವಂಡೆ, ಮೋರೆ ವಿಠ್ಠಲ್ ವಾಳ್ ವಲ್ ಕರ್, ಸಖಾರಾಮ ಯಶವಂತ್ ಪರಾಂಜಪೆ, ತಾತ್ಯಾ ಸಾಹೇಬ್ ಭಿಡೆ ಮೊದಲಾದವರು ಜೋತಿಬಾ ಮತ್ತು ಸಾವಿತ್ರಿಬಾಯಿಗೆ ಹೆಗಲೆಣೆಯಾಗಿ ನಿಂತಿದ್ದರು.
ಸಾವಿತ್ರಿಬಾಯಿ ಫುಲೆಯವರು ತಮ್ಮ ಪತಿ ಜ್ಯೋತಿಬಾ ಫುಲೆ ಅವರಿಗೆ ದುಃಖದಿಂದ ಹೀಗೆ ಹೇಳಿದರು ” ರೀ ಶಾಲೆಗೆ ಹೋಗುವಾಗ ಬೀದಿಯಲ್ಲಿ ಚೇಡಿಸುತ್ತಾರೆ, ಸಗಣಿಯಿಂದ ಒಡೆಯುತ್ತಾರೆ, ಗಲೀಜುಗಳನ್ನು ಮೈಮೇಲೆ ಎಸೆಯುತ್ತಾರೆ. ಬಟ್ಟೆಯೆಲ್ಲ ಮಲಿನವಾಗುತ್ತಿದೆ ಎಂದು. ಅದಕ್ಕೆ ಫುಲೆ ಉತ್ತರಿಸುತ್ತಾ ” ಸಾವಿತ್ರಿ ನೀನು ಮತ್ತೊಂದು ಜೊತೆ ಬಟ್ಟೆಯನ್ನು ಶಾಲೆಗೆ ಕೊಂಡು ಹೋಗು. ಶಾಲೆಯಲ್ಲಿ ಮಲಿನವಾದ ಬಟ್ಟೆ ಬಿಚ್ಚಿಟ್ಟು, ಶುಭ್ರವಾದ ಬಟ್ಟೆ ತೊಟ್ಟು ಪಾಠ ಮಾಡು. ಮನೆಗೆ ಬರುವಾಗ ಮಲೀನವಾದ ಬಟ್ಟೆಯನ್ನು ಮತ್ತೆ ಧರಿಸಿ ಬಾ. ಮುಂದೆ ಭಾರತದ ಸ್ತ್ರೀಕುಲ ನಿನ್ನನ್ನು ಸ್ಮರಿಸುತ್ತದೆ” ಎಂದರು. ಸಾವಿತ್ರಿ ಬಾಫುಲೆ ಹಾಗೇ ಮಾಡಿದರು. ಈಗ ಉಳಿದಿರುವುದು ಇಂದಿನ ಭಾರತ ಅವರನ್ನು ಸ್ವೀಕರಿಸುವುದು ಮಾತ್ರ.