ಜನವರಿ-1 ಭೀಮಾ ಕೋರೆಗಾಂವ್ ವಿಜಯೋತ್ಸವದೊಂದಿಗೆ ಹೊಸವರ್ಷದ ಸುದಿನ ಮತ್ತು ಶೂದ್ರಾತಿಶೂದ್ರ ಮಹಿಳೆಯರಿಗೆ “ಅಕ್ಷರ ದಿನ”
ಜಗತ್ತಿನ ಚರಿತ್ರೆಯಲ್ಲಿಯೇ ಇದೊಂದು ಅಭೂಪೂರ್ವ ವಿಜಯ. ಮನುವಾದಿ ಪೇಶ್ವೆಗಳ 28 ಸಾವಿರ ಸೈನಿಕರನ್ನು 500 ಜನ ಮಹಾರ್ ಸೈನಿಕರು ಸದೆಬಡಿದು, ಮನುವಾದಿಗಳ ಅಟ್ಟಹಾಸವನ್ನು ಮಟ್ಟಹಾಕಿ ಚರಿತ್ರೆ ನಿರ್ಮಿಸಿದ ಅಸಾಮಾನ್ಯ ವಿಜಯ!,

ಜನವರಿ-1 ಭೀಮಾ ಕೋರೆಗಾಂವ್ ವಿಜಯೋತ್ಸವದೊಂದಿಗೆ ಹೊಸವರ್ಷದ ಸುದಿನ ಮತ್ತು ಶೂದ್ರಾತಿಶೂದ್ರ ಮಹಿಳೆಯರಿಗೆ “ಅಕ್ಷರ ದಿನ”
ಹೌದು, ಎಲ್ಲರಿಗೂ ಇದು ಅಚ್ಚರಿ ಪಡುವ ವಿಚಾರವೇ!!, ಮನುಸ್ಮೃತಿ ಕಾನೂನಿನ ಮೂಲಕ ಶೂದ್ರಾತಿಶೂದ್ರರಿಗೆ ವಿದ್ಯೆ ನಿಷೇದಿಸಿದ 2 ಸಾವಿರ ವರ್ಷಗಳ ಅಂಧಕಾರದ ಕರಾಳದಿನಗಳಲ್ಲಿ ವಿದ್ಯದಾತ ಮಹಾತ್ಮ ಜ್ಯೋತಿಬಾಫುಲೆ ಅವರು ಶಿಕ್ಷಣ ಸಂಸ್ಥೆ ತೆರೆದು ಶೂದ್ರಾತಿಶೂದ್ರ ಮಹಿಳೆಯರಿಗೆ ಮೊದಲಬಾರಿಗೆ ಅಕ್ಷರ ಹೇಳಿಕೊಟ್ಟ “ಅಕ್ಷರದಿನ”ವಾಗಿದೆ.
1848 ರಲ್ಲಿ ಸಾವಿತ್ರಿಬಾ ಅವರು 18 ಶಾಲೆಗಳನ್ನು ತೆರೆದು ಬ್ರಾಹ್ಮಣ ಮಹಿಳೆಯರು ಸೇರಿದಂತೆ ಎಲ್ಲಾ ಸಮುದಾಯದ ಮಕ್ಕಳಿಗೆ ವಿದ್ಯೆ ಕಲಿಸಲು ಪ್ರಾರಂಬಿಸುತ್ತಾರೆ. ಮನುವಾದಿಗಳು ನೀಡಿದ ಅನೇಕ ಅವಮಾನ, ಸಂಕಷ್ಟಗಳನ್ನು ಎದುರಿಸಿ ವಿದ್ಯಾದಾನ ಮಾಡಿ ಸಾಧಕರಾಗುತ್ತಾರೆ.
ಅಂದಿನಿಂದ ವಿದ್ಯೆಕಲಿತ ಶೂದ್ರಾತಿಶೂದ್ರರು ಸ್ವಾಭಿಮಾನಿಗಳಾಗಿ ಹುದ್ದೆಗಳತ್ತ ಮುಖಮಾಡುತ್ತಾರೆ. ವಿದ್ಯಾದೇವತೆ ಸಾವಿತ್ರಿಬಾಫುಲೆ ಅವರು ಮೊದಲ ಶಿಕ್ಷಕಿಯಾಗಿ ಬಹುಜನ ಮಹಿಳೆಯರಿಗೆ ವಿದ್ಯೆ ಹೇಳಿಕೊಟ್ಟು ಅಕ್ಷರದಾತೆಯಾಗುತ್ತಾರೆ.
ಇನ್ನು ಭೀಮಾ ಕೋರೆಗಾಂವ್ ವಿಚಾರಕ್ಕೆ ಬಂದ್ರೆ,
ಇದೇ ಜನವರಿ 1.2025ಕ್ಕೆ ಕೋರೆಗಾಂವ್ ವಿಜಯೋತ್ಸವಕ್ಕೆ 207 ವರ್ಷಗಳು ತುಂಬುತ್ತದೆ. ಹಾಗಾಗಿ ದೇಶದೆಲ್ಲೆಡೆ ಮೂಲನಿವಾಸಿ ಬಹಜನರು ಈ ಉತ್ಸವದ ಆಚರಣೆಯನ್ನು ಸಡಗರ-ಸಂಭ್ರಮಗಳಿಂದ ಆಚರಿಸುತ್ತಾರೆ.
2000ವರ್ಷಗಳ ಹಿಂದೆ ಜೀವವಿರೋಧಿ ಮನುಸ್ಮೃತಿ ಕಾನೂನುಗಳನ್ನು ರಾಜಾಡಳಿತದ ಮೂಲಕ ಹೇರಿಕೊಂಡು ದೇಶವಾಳುತ್ತಿದ್ದ ಮನುವಾದಿಗಳ ರಾಜರುಗಳಿಗೆ ಜ.1.1818 ರಂದು ಶೌರ್ಯ ಪ್ರದರ್ಶಿಸಿದ ಮಹೋನ್ನತ ಸುದಿನ. ಕೇವಲ 500 ಮಹಾರ್ ಸೈನಿಕರು ಸುಮಾರು 28 ಸಾವಿರದಷ್ಟಿದ್ದ ಮನುವಾದಿ ಪೇಶ್ವೆಸೈನಿಕರನ್ನು ಸದೆಬಡಿದು ಇತಿಹಾಸ ನಿರ್ಮಿಸಿದ್ದರು. ಆಗ ಬ್ರಿಟೀಷರಿಗೂ-ಪೇಶ್ವೆಗಳಿಗೂ ಯುದ್ಧ ಎರ್ಪಟ್ಟಿತ್ತು. ಪೇಶ್ವೆಗಳು ಮನುವಾದದ ಪ್ರತಿಪಾದಕರಾಗಿದ್ದರು. ಹಾಗಾಗಿ ಮನುಸ್ಮೃತಿ ಹೇರಿದ್ದ ಚಾತುವರ್ಣ ಪದ್ದತಿಯಂತೆ ಆಳ್ವಿಕೆ ನಡೆಸಿದ ಇವರು ಹಿಂದುಳಿದ ಜಾತಿಗಳು, ಅಸ್ಪೃಶ್ಯರು ಹಾಗೂ ಮಹಿಳೆಯರನ್ನು ಅತ್ಯಂತ ಅವಮಾನಕರ ರೀತಿಯಲ್ಲಿ ನಡೆಸಿಕೊಳ್ಳುತ್ತಿದ್ದರು. ಹಾಗಾಗಿ ಬ್ರಿಟೀಷ್ ಸೈನ್ಯದಲ್ಲಿ ದುಡಿಯುತ್ತಿದ್ದ ಮಹಾರ್ ಸೈನಿಕರಿಗೆ ಪೇಶ್ವೆಗಳ ಮೇಲೆ ಅಪಾರವಾದ ಸಿಟ್ಟಿತ್ತು. ಇಷ್ಟಾದರೂ ಬ್ರಿಟೀಷರಿಗೂ ಪೇಶ್ವೆಗಳಿಗೂ ಯುದ್ಧ ಎರ್ಪಟ್ಟಾಗ ಬ್ರಿಟೀಷ್ ಸೈನ್ಯದ ಮಹಾರ್ ರೆಜಿಮೆಂಟಿನ ನಾಯಕನಾಗಿದ್ದ “ಸಿದನಾಕ”ನು ಪೇಶ್ವೆ ಬಾಜಿರಾಯನನ್ನು ಗುಟ್ಟಾಗಿ ಸಂಧಿಸಿದನು. “ಎಷ್ಟೇ ಆಗಲಿ ಬ್ರಿಟೀಷರು ಹೊರಗಿನವರು, ನೀವು ನಮ್ಮವರು, ನಾವು ನಿಮ್ಮ ಪರವಾಗಿ ಹೋರಾಡಲು ಸಿದ್ದರಿದ್ದೇವೆ, ಆದರೆ ಯುದ್ಧದ ನಂತರ ನೀವು ನಮ್ಮನ್ನು ಹೇಗೆ ನಡೆಸಿಕೊಳ್ಳುವಿರಿ?” ಎಂದು ಬಾಜಿರಾಯನನ್ನು ಕೇಳಿದನು. ಅದಕ್ಕವನು ಧರ್ಮಶಾಸ್ತ್ರಗಳು ಹೇಗೆ ಹೇಳುತ್ತವೆಯೋ ಹಾಗೆಯೇ ನಿಮ್ಮನ್ನು ನಡೆಸಿಕೊಳ್ಳುತ್ತೇನೆ, ಅಷ್ಟಕ್ಕೂ ಅಸ್ಪೃಶ್ಯನಾದ ನಿನ್ನನ್ನು ನನ್ನ ಆಸ್ಥಾನನದೊಳಕ್ಕೆ ಬಿಟ್ಟುಕೊಂಡದ್ದೇ ದೊಡ್ಡ ತಪ್ಪು” ಎಂದು ಅವಮಾನ ಮಾಡಿ…. ಈ ಅಸ್ಪೃಶ್ಯನನ್ನು ಅರಮನೆ ಒಳಕ್ಕೆ ಕರೆತಂದವನಿಗೆ ನೇಣುಹಾಕಿರಿ, ಇವನು ನಿಂತ ನೆಲವನ್ನು ಗೋ ಮೂತ್ರದಿಂದ ಶುದ್ಧಿಗೊಳಿಸಿ” ಎಂದೆಲ್ಲ ಕೂಗಾಡಿದ.
ಇದು ಹುಟ್ಟು ಸ್ವಾಭಿಮಾನಿಗಳಾಗಿದ್ದ ಮಹಾರ್ ಸೈನಿಕರನ್ನು ಕೆರಳಿಸಿತು.ಪೇಶ್ವೆಯ ದುರಹಂಕಾರದ ಮಾತುಗಳನ್ನು ಕೇಳಿ ಅವನಿಗೆ ತಕ್ಕ ಪಾಠ ಕಲಿಸಬೇಕೆಂದು ಆ ಮಹಾರ್ ಸೈನಿಕರು ತೀರ್ಮಾನ ಮಾಡಿದರು. ಬ್ರಿಟೀಷ್ ರೆಜಿಮೆಂಟ್ ಸೈನಿಕರಿಗೂ ಪೇಶ್ವೆಗಳ ಸೈನಿಕರಿಗೂ ಯುದ್ಧ ಏರ್ಪಟ್ಟಿತು, ಯುದ್ಧವು ಭೀಮಾ ನದಿ ತೀರದ ದಂಡೆಯ ವಿಶಾಲ ರಣರಂಗದಲ್ಲಿ ನಡೆಯಿತು.. ಸಿದ್ಧನಾಕ ಮತ್ತು ತಂಡದವರ ಅಬ್ಬರಕ್ಕೆ ಪೇಶ್ವೇ ಸೈನ್ಯ ಬಿಬ್ಬಿರಿದು, ಅದರಿ ಅಲ್ಲಾಡಿ ಬೆದರಿ ಬೆಂಡಾಗಿ ಸೋತು ಮಣ್ಣಾಯಿತು…
ಯುದ್ಧ ಗೆದ್ದ ವಿಚಾರ ತಿಳಿದ ಬ್ರಿಟೀಷ್ ರಾಣಿ ಎಲಿಜತ್ ಳು ವೈಸರಾಯಿಗೆ ಇಂತಹ ಅಪ್ರತಿಮ ವೀರ ಸೈನಿಕರ ಸ್ಮರರ್ಣಾಥ ಯುದ್ಧ ನಡೆದ ಸ್ಥಳದಲ್ಲಿ ಸೈನಿಕರ ಹೆಸರುಳ್ಳ ವಿಜಯಸ್ಥಂಭ ನಿಲ್ಲಿಸುವಂತೆ ಆದೇಶಿಸಿದ ಪರಿಣಾಮ ಇನ್ನೂ ಆ ಸ್ಥಂಭಕ್ಕೆ ಬಹುಜನರಿಂದ ನಮನ ಸಲ್ಲಿಸುತ್ತೇವೆ
ಅವರ ಅಪ್ರತಿಮ ಹೋರಾಟದ ಪ್ರತಿಫಲವೇ ಈ ಭೀಮಾ ಕೋರೆಗಾಂವ್ ವಿಜಯೋತ್ಸವ.
ಬಂಧುಗಳೇ…
ಜಗತ್ತಿನ ಚರಿತ್ರೆಯಲ್ಲಿಯೇ ಇದೊಂದು ಅಭೂಪೂರ್ವ ವಿಜಯ. ಮನುವಾದಿ ಪೇಶ್ವೆಗಳ 28 ಸಾವಿರ ಸೈನಿಕರನ್ನು 500 ಜನ ಮಹಾರ್ ಸೈನಿಕರು ಸದೆಬಡಿದು, ಮನುವಾದಿಗಳ ಅಟ್ಟಹಾಸವನ್ನು ಮಟ್ಟಹಾಕಿ ಚರಿತ್ರೆ ನಿರ್ಮಿಸಿದ ಅಸಾಮಾನ್ಯ ವಿಜಯ!, ಅಸ್ಪೃಶ್ಯರ ಈ ಭವ್ಯ ಚರಿತ್ರೆಯನ್ನು ಸಂಶೋಧಿಸಿ ಜಗತ್ತಿಗೆ ಪರಿಚಯಿಸಿದವರು ವಿಶ್ವ ಇತಿಹಾಸತಜ್ಞ ಬಾಬಾಸಾಹೇಬರು. ಅವರು ಪ್ರತಿವರ್ಷ ಜ.01ನೇ ತಾರೀಖಿನ ದಿನ ಕೋರೆಗಾಂವ್ ಗೆ ಭೇಟಿ ನೀಡಿ ಅಲ್ಲಿರುವ ವಿಜಯಸ್ತಂಭಕ್ಕೆ ನಮಿಸುತ್ತಿದ್ದರು. “ಇಂತಹ ಶೂರ-ವೀರರ ವಂಶಸ್ಥರಾದ ನಾವು ಭಾರತದಲ್ಲಿ ಮನುವಾದಿ ವ್ಯವಸ್ಥೆಯನ್ನು ಅಳಿಸಿ, ಸಮಸಮಾಜವನ್ನು ಸ್ಥಾಪಿಸಲು ನಾವೇ ಆಳುವ ದೊರೆಗಳಾಗಬೇಕೆಂದು ಬಾಬಾಸಾಹೇಬರು ಕರೆ ನೀಡಿದರು”. ಇದರ ಫಲವಾಗಿ ಬಹುಜನರು ಜಗತ್ತಿನಾದ್ಯಂತ ಜನವರಿ-01ನೇ ದಿನವನ್ನು ಕೋರೇಗಾಂವ್ ವಿಜಯೋತ್ಸವವೆಂದೇ ಆಚರಿಸುತ್ತಾರೆ.
ಬನ್ನಿ ಆಚರಿಸೋಣ…
ಭೀಮ ಕೋರೆಗಾಂವ್ ದಂಗೆ :
ಜನವರಿ – 1 , 1818 ( ಸಿಪಾಯಿ ದಂಗೆಗಿಂತ 40 ವರ್ಷಗಳ ಮೊದಲೇ ಸ್ವಾತಂತ್ರ್ಯ, ಸ್ವಾಭಿಮಾನ ಮತ್ತು ವಿದ್ಯೆ, ಸಂರಕ್ಷಣೆಗಾಗಿ ನಡೆದ ಅಸ್ಪಶ್ಯರ ಮಹಾದಂಗೆ )
ಯುದ್ಧದಲ್ಲಿ ಹೋರಾಟ ನಡೆಸಿ ಮಹಾವೀರರ ಹೆಸರುಗಳು
1 . ಸಿದ್ದನಾಕ ಮಕಲನಾಕ ನಾಯಕ
2 . ರಾಮನಾಕ ಯಶನಾಕ ಸಿಪಾಯಿ
3 , ಗೋದನಾಕ ಮೋಡೆನಾಕ ಸಿಪಾಯಿ
4 , ರಾಮನಾಕ ಯಶನಾಕ ಸಿಪಾಯಿ
5 . ಭಾಗನಾಕ ಹರನಾಕ ಸಿಪಾಯಿ
6 . ಅಂಬನಾಕ ಕಾನನಾಕ ಸಿಪಾಯಿ
7 . ಗಣನಾಕ ಬಾಳನಾಕ ಸಿಪಾಯಿ
8 . ಬಾಳನಾಖ ದೊಂಡನಾಕ ಸಿಪಾಯಿ
9 , ರೂಪನಾಕ ಲಖನಾಕ ಸಿಪಾಯಿ
10 . ಬಾಲನಾಕ ರಾಮನಾಕ ಸಿಪಾಯಿ
11 . ವಟಿನಾಕ ಧಾನನಾಕ ಸಿಪಾಯಿ
12 . ಗಜನಾಕ ಗಣನಾಕ gಸಿಪಾಯಿ
13 . ಬಾಪನಾಕ ಹಬನಾಕ ಸಿಪಾಯಿ
14 . ಕೋನಾಕ ಜಾನನಾಕ ಸಿಪಾಯಿ
15 . ಸಮನಾಕ ಯಸನಾಕ ಸಿಪಾಯಿ
16 , ಗಣನಾಕ ಧರಮನಾಕ ಸಿಪಾಯಿ
17 . ದೇವನಾಕ ಅಂಕನಾಕ ಸಿಪಾಯಿ
18 . ಗೋಪಾಲನಾಕ ಬಾಲಿನಾಕ ಸಿಪಾಯಿ
19 , ಹರನಾಕ ಹರಿನಾಕ ಸಿಪಾಯಿ
20 . ಜೇಠನಾಕ ದೌನಾಕ ಸಿಪಾಯಿ
21 . ಗಣನಾಕ ಲಖನಾಕ ಸಿಪಾಯಿ
22 . ಸೀನನಾಕ ಮಕಲನಾಕ ಸಿಪಾಯಿ
ಪ್ರತಿವರ್ಷ ಭೀಮಾ ಕೋರೇಂಗಾವ್ ವಿಜಯಸ್ಥಂಭ ನೋಡಲು, ಮಹಾರ್ ಸೈನಿಕರಿಗೆ ನಮನ ಸಲ್ಲಿಸಲು ಆಗಮಿಸು ಲಕ್ಷ ಲಕ್ಷ ಭೀಮಾ ಅನುಯಾಯಿಗಳು ಆಗಮಿಸಿ ತಮ್ಮ ಪೂರ್ವಿಕರ ಶೌರ್ಯವನ್ನ ಸ್ಮರಿಸುತ್ತಾ ನಮನ ಸಲ್ಲಿಸುತ್ತಾರೆ.
1818 ಜನವರಿ 1ರಲ್ಲಿ ಕೋರೆಗಾಂವ್ ಯುದ್ಧ ಗೆದ್ದ ಮಹರ್ ವೀರರಿಗೆ ಅಭೂತಪೂರ್ವ ಸನ್ಮಾನ ಮಾಡಿ ಗೌರವ ಸಮರ್ಪಿಸಿದ ಬ್ರಿಟಿಷರು “ನಿಮಗೇನು ಬೇಕು ಕೇಳಿ ಏನು ಕೇಳಿದರೂ ಬ್ರಿಟಿಷ್ ಸರ್ಕಾರ ಕೊಡುತ್ತದೆ ಸಂಕೋಚವಿಲ್ಲದೆ ಕೇಳಿ…” ಎಂದಾಗ ಬಹುಶಃ ತಾವೇ ಗೆದ್ದುಕೊಟ್ಟಿದ್ದ ಮಹಾರಾಷ್ಟ್ರದೊಳಗೆ ಒಂದು ಪ್ರತ್ಯೇಕ ರಾಜ್ಯವೊಂದನ್ನು ಕೇಳಿದರೂ ಮನಸಾರೆ ಕೊಟ್ಟುಬಿಡುವಷ್ಟು ಉತ್ಸಾಹದಲ್ಲಿದ್ದರು ಬ್ರಿಟಿಷರು… ಇವರ ಶೌರ್ಯಸಾಹಸಕ್ಕೆ ಮನಸೋತು ಕೃತಜ್ಞತಾಭಾವದಿಂದ ಎಲಿಜೆಬೆತ್ ರಾಣಿಯ ಆದೇಶದಂತೆ ಭಾರತದಲ್ಲಿದ್ದ ಬ್ರಿಟಿಷರು ಈ ಮಹರ್ ವೀರರಿಗೆ ಪದೇ ಪದೇ ಕೇಳುತ್ತಲೇ ಇದ್ದರು “ನಿಮಗೇನು ಉಡುಗೊರೆ ಬೇಕು ಕೇಳಿ ನಿಮ್ಮ ಕೋರಿಕೆ ಏನು ಹೇಳಿ
ಈಡೇಸರಿಸುವುದಷ್ಟೇ ನಮ್ಮ ಕರ್ತವ್ಯ” ಎಂದರು…. ವ್ಯಾಪಾರಿ ಮನೋಭಾವದ ಬ್ರಿಟಿಷರ ತಲೆಯಲ್ಲಿ ಇವರು ಏನು ಕೇಳಬಹುದು ಧನಕನಕ..? ಭೂಮಿ..? ಅಧಿಕಾರ..? ಸ್ಥಾನಮಾನ..? ಇವೇ ತಾನೇ ಇವುಗಳಲ್ಲಿ ಏನು ಕೇಳಿದರೂ ಅಥವಾ ಕೇಳಿದ ಎಲ್ಲವನ್ನೂ ಕೊಟ್ಟು ಈ ಶೂರವಂತರ ಋಣತೀರಿಸೋಣ ಎಂದು ಮನದಲ್ಲೇ ಲೆಕ್ಕಹಾಕುತ್ತಾ ಕೇಳುತ್ತಲೇ ಇದ್ದರು… “ನಿಮಗೇನು ಬೇಕು ಕೇಳಿ ಯೋಧರೇ……”
ಯುದ್ಧಗೆದ್ದು ಸ್ವಾಭಿಮಾನ ಮೆರೆದು ಜಾತಿಕೊಳಕನ್ನೇ ಉಸಿರಾಡುತ್ತಿದ್ದ ದುರಹಂಕಾರಿ ಬ್ರಾಹ್ಮ್ಯಣದ ವ್ಯವಸ್ಥೆಯನ್ನೇ ಹೊಸಕಿಹಾಕಿದ ಮಹಾತೃಪ್ತಿಯಲ್ಲಿ ಮೀಸೆ ಅಡಿಯಲ್ಲೇ ಸಾರ್ಥಕದ ಆತ್ಮಾಭಿಮಾನದನಗೆಬೀರಿ ನಿಂತಿದ್ದ ಒಬ್ಬೊಬ್ಬ ಮಹಾರ್ ವೀರಯೋಧನ ಮೆದುಳುಗಳು ಅವರವರ ಹೃದಯಗಳನ್ನು ಒತ್ತಿನಿಂತಿದ್ದವು..! ಏನು ಕೇಳಬೇಕು ಅವರ ಕಣ್ಣುಗಳು ಪರಸ್ಪರ ಮಾತಾಡಿಕೊಂಡುವು..! ನಿರ್ಧಾರ ಮಾಡಿ ಒಂದು ಗಟ್ಟಿ ಕೋರಿಕೆಯನ್ನು ಬ್ರಿಟಿಷರ ಮುಂದಿಟ್ಟರು. ಹೌದು., ಅವರು ಬ್ರಿಟಿಷರು ಎಣಿಸಿದಂತೆ ತಮ್ಮ ಸ್ವಂತಕ್ಕೆ ಸ್ವಾರ್ಥಕ್ಕೆ ಏನನ್ನೂ ಕೇಳಲಿಲ್ಲ..! ದಾನವ ಕುಲದ ಈ ವೀರ ಕುಡಿಗಳು ಕೇಳಿದ್ದೇನು ಗೊತ್ತೇ..!? ನಮ್ಮ ಕೋರಿಕೆ ಇಷ್ಟೇ… “ನಮ್ಮ ಶೌರ್ಯಸಾಹಸಕ್ಕೆ ತ್ಯಾಗಕ್ಕೆ ಯುದ್ಧ ಗೆದ್ದುಕೊಟ್ಟ ಸಂತಸಕ್ಕೆ ನಮಗೇನಾದರೂ ಕೊಡಲೇಬೇಕೆಂಬುದು ನಿಮ್ಮ ಇಚ್ಛೆಯಿದ್ದರೆ ಆ ಜಾತಿ ಈ ಜಾತಿ ಎನ್ನದೆ ಹೆಣ್ಣು ಗಂಡೆನ್ನದೆ ಎಲ್ಲಾ ಭಾರತೀಯರಿಗೂ ಆಧುನಿಕ ಶಿಕ್ಷಣ ಕೊಡುವ ಹೊಸ ವ್ಯವಸ್ಥೆಯನ್ನು ಜಾರಿಗೆ ತನ್ನಿ” ಎಂದು ವಿನಮ್ರವಾಗಿ ಆಧುನಿಕ ಭಾರತದ ಕನಸುಕಾಣುತ್ತಿದ್ದ ಬುದ್ಧತ್ವ ತುಂಬಿದ ತಾಯಂದಿರಂತೆ ಬ್ರಿಟಿಷರಿಗೆ ಕೋರಿ ಅರುಹಿದರು..!
ಬ್ರಿಟಿಷರು ಒಂದು ಕ್ಷಣ ಸ್ಥಂಭೀಭೂತರಾದರು..! ಆ ಮಹಾಯೋಧರ ಪ್ರಬುದ್ಧತೆಗೆ ನಿಸ್ವಾರ್ಥತನಕ್ಕೆ ಮತ್ತು ದೇಶಪ್ರೇಮಕ್ಕೆ ಹುಬ್ಬೇರಿಸಿದರು ಒಳಗೊಳಗೆ ಶಹಭಾಶ್ ಎಂದರು..! ಮಹಾರ್ ಯೋಧರ ಕೋರಿಕೆಯ ವಿಷಯವು ಬ್ರಿಟನ್ ರಾಣಿ ಎಲಿಜೆಬತ್ ಗೆ ಮುಟ್ಟಿತು. ಅವರ ಕೋರಿಕೆಯನ್ನು ಖಂಡಿತ ನೆರವೇರಿಸುವುದಾಗಿ ಮಾತು ಕೊಟ್ಟು ಸಧ್ಯ ಈ ಜಗದ್ವಿಖ್ಯಾತ ಐತಿಹಾಸಿಕ ಯುದ್ಧಸ್ಮಾರಕವನ್ನು ಆ ಮಡಿದ ವೀರಯೋಧರ ಹೆಸರಿನಲ್ಲೇ ನಿರ್ಮಿಸಿ ಆ ಸ್ಮಾರಕ ನಿರ್ಮಾಣದ ನಂತರ ಅವರ ಕೋರಿಕೆಯನ್ನು ಆದೇಶ ಮಾಡುವಂತೆ ತೀರ್ಮಾನವಾಯಿತು. ಯುದ್ದನಡೆದ ಭೀಮಾನದಿಯ ದಡದಲ್ಲೇ ಭೀಮಕೋರೆಗಾಂವ್ ವಿಜಯಸಂಕೇತ ಸ್ಮಾರಕ ತಲೆಯೆತ್ತಿತು..! ಈ ನಡುವೆ ಬ್ರಿಟಿಷರು ಬೇರೆ ಬೇರೆ ಯುದ್ದಗಳಲ್ಲಿ ಸವಾಲುಗಳಲ್ಲಿ ಆಡಳಿತಾತ್ಮಕ ಕೆಲಸಗಳಲ್ಲಿ ತೊಡಗಿಕೊಂಡು ಬ್ಯುಸಿಯಾದರೂ ಕೋರೆಗಾಂವ್ ವೀರರ ಬೇಡಿಕೆಯನ್ನು ಮರೆಯಲಿಲ್ಲ. 1835 ರಲ್ಲಿ ಬ್ರಿಟಿಷ್ ವೈಸರಾಯ್ ಮತ್ತು ಶಿಕ್ಷಣ ತಜ್ಞ ಲಾರ್ಡ್ ಮೆಕಾಲೆಯು ಕೊರೆಗಾಂವ್ ವೀರರ ಕೋರಿಕೆಯಂತೆ ಬ್ರಿಟನ್ ರಾಣಿಯ ಆದೇಶದಂತೆ ಭಾರತದಲ್ಲಿ ಸಾರ್ವರ್ತಿಕ ಶಿಕ್ಷಣ ಪದ್ಧತಿಯನ್ನು ಜಾರಿಗೆ ತಂದು ಬ್ರಾಹ್ಮಣ್ಯದ ಮನುಸ್ಮೃತಿಯ ಕಾಲದಿಂದ ಇಲ್ಲಿಯವರೆಗೆ ಸರಿಸುಮಾರು ಎರಡುಸಾವಿರ ವರ್ಷಗಳ ಕಾಲ ಕೇವಲ ಬ್ರಾಹ್ಮಣ-ಬನಿಯಾಗಳ ಸ್ವತ್ತಾಗಿದ್ದ ಶಿಕ್ಷಣವನ್ನು ಲಿಂಗಾಯತ ಒಕ್ಕಲಿಗ ಗೌಡ ಕುರುಬ ಕುಂಬಾರ ಅಗಸ ಉಪ್ಪಾರ ಹೂಗಾರ ಗಾಣಿಗ ಈಡಿಗ ಬಲಿಜಿಗ ಕಮ್ಮಾರ ಗೊಲ್ಲ ನೇಕಾರ ರೆಡ್ಡಿ ನಾಯ್ಡು ಕ್ಷೌರಿಕ ಚಮ್ಮಾರ ನಾಯಕ ಮಾದಿಗ ಹೊಲಯ ಹೀಗೆ ಆರುಸಾವಿರ ಜಾತಿಗಳೆಲ್ಲರಿಗೂ ಶಿಕ್ಷಣ ಕಲಿಯುವ ಮುಕ್ತ ವ್ಯವಸ್ಥೆ ಜಾರಿಗೆ ಬಂದಿತು..!!
ಸಾರ್ವತ್ರಿಕ ಶಿಕ್ಷಣ ಪದ್ಧತಿ (ಯಾರು ಬೇಕಾದರೂ ಶಿಕ್ಷಣ ಪಡೆಯಬಹುದು) ಜಾರಿಗೆ ಬಂದ ಪರಿಣಾಮ 2000 ವರ್ಷಗಳ ನಂತರ ಬ್ರಾಹ್ಮಣಲ್ಲದ ಮೊದಲ ಅಬ್ರಾಹ್ಮಣ ಹಿಂದುಳಿದ ವರ್ಗದ ಹೂಗಾರ ಜಾತಿಯ ಜ್ಯೋತಿಬಾಫುಲೆ ಶಾಲೆ ಸೇರಿದರು..! ಕಲಿತರು ಮಾದರಿಯಾದರು. 1848 ರಲ್ಲಿ ಅವರೇ ಶಾಲೆತೆರೆದರು. ತಮ್ಮ ಮಡದಿ ಸಾವಿತ್ರಿಫುಲೆ “First Indian Lady teacher” ಆದರು. ಫುಲೆಯವರಿಂದ ಸ್ಫೂರ್ತಿಪಡೆದ ಬಾಬಾಸಾಹೇಬರ ತಂದೆ ರಾಮ್ಜಿಸಕ್ಪಾಲರು ತಮ್ಮ ಮಗ ಭೀಮರಾವ್ ಅಂಬವಾಡೇಕರ್ (ಅಂಬೇಡ್ಕರ್) ರವರನ್ನು ಶಾಲೆಗೆ ಸೇರಿಸಿದರು. ಅಂಬೇಡ್ಕರ್ ಶಾಲೆ ಕಲಿತು ಆಧುನಿಕ ಭಾರತವು ಹೆಮ್ಮೆಪಡುವಂತೆ ಬೆಳೆದರು ವಿಶ್ವಜ್ಞಾನಿಯಾದರು. ಭಾರತೀಯರಿಗೆ ಹಕ್ಕುಅಧಿಕಾರಗಳನ್ನು ಕೊಡಿಸಿಕೊಡಲು ಪೂರ್ಣಬದುಕನ್ನು ಮೀಸಲಿಟ್ಟು ಅವಿರತ ದುಡಿದರು. ಭಾರತಕ್ಕೊಂದು ಜಗತ್ತಿನಲ್ಲೇ ಶ್ರೇಷ್ಠವೆನಿಸುವಂಥ ಅದ್ಭುತ ಸಂವಿಧಾನವನ್ನು ರಚಿಸಿ ಸಮರ್ಪಿಸಿದರು..! ಆ ಸಂವಿಧಾನದಲ್ಲಿ ಅಡಕವಾಗಿರುವ ಹಕ್ಕು ಅಧಿಕಾರಗಳಿಂದ ಇಂದು ನಾವು ಎಲ್ಲಾ ಜಾತಿಧರ್ಮಲಿಂಗದವರೂ ಶಿಕ್ಷಣ ಕಲಿಯುತ್ತಿದ್ದೇವೆ ಕಲಿಸುತ್ತಿದ್ದೇವೆ… ಉದ್ಯೋಗ ಪಡೆಯುತ್ತಿದ್ದೇವೆ… ಬದುಕುತ್ತಿದ್ದೇವೆ…!
ಅಂದು ಕೊರೆಗಾಂವ್ ಯುದ್ಧಗೆದ್ದ ಮಹರ್ ಸೈನಿಕರು ಬಿತ್ತಿದ ಶಿಕ್ಷಣದ ಬೆಳಕಿನ ಬೀಜ ಇಂದು ನಮ್ಮೆಲ್ಲರ ಮನೆಮನವನ್ನು ತುಂಬಿದೆ…. ಎಲ್ಲಿ, ಎಲ್ಲರೂ ಕುಂತಲ್ಲೇ ಎದ್ದು ನಿಂತು ಮನದಲ್ಲೇ ಆ ಎಲ್ಲಾ ಹೋರಾಡಿದ ಮಡಿದ ಮಹಾರ್ ರೆಜಿಮೆಂಟ್ ನ ವೀರರಿಗೊಂದು ಅಭಿಮಾನತುಂಬಿದ ಬಿಗ್ ಸೆಲ್ಯೂಟ್ ಹೊಡೆಯೋಣವೇ…? ಮನದಲ್ಲೇ ಕೃತಜ್ಞತೆ ಸಲ್ಲಿಸೋಣವೇ ಮತ್ತು ಈ ಹೆಮ್ಮೆವಿಚಾರವನ್ಮು ನಮ್ಮ ಮನೆಮಂದಿಗೆಲ್ಲಾ ಊರು ಕೇರಿಯ ಜನಕ್ಕೆಲ್ಲಾ ನಮ್ಮ ಸುತ್ತಮುತ್ತಲ ಜನಕ್ಕೆಲ್ಲಾ ತಿಳಿಸೋಣವೇ.? ಕೊರೆಗಾಂವ್ ಚರಿತ್ರೆಯನ್ನು ಮೊದಲಬಾರಿಗೆ ಜಗತ್ತಿಗೆ ತಿಳಿಸಿಕೊಟ್ಟ ಬಾಬಾಸಾಹೇಬರನ್ನು ಮನದಲ್ಲಿ ನೆನೆಯುತ್ತಾ ಎದೆಯೊಳಗೆ ಬಲತುಂಬಿಕೊಂಡು ಶಪಥ ಮಾಡಿ ಕೇವಲ ಸ್ವಾರ್ಥಕ್ಕಾಗಿ ಜೀವಿಸದೆ ಅಂದಿನ ಕೊರೆಗಾಂವ್ ವೀರರಿಂದ ಸ್ಪೂರ್ತಿ ಪಡೆದು ಇಂದಿನ ಮನುವಾದೀ ಕೆಟ್ಟವ್ಯವಸ್ಥೆಯ ವಿರುದ್ಧ ಸಾಮಾಜಿಕ ಧಾರ್ಮಿಕ ರಾಜಕೀಯ ಕ್ರಾಂತ್ರಿಗೆ ಅಣಿಯಾಗೋಣವೇ..!? ಸಾರ್ಥಕದ ಜೀವನಕ್ಕೆ ಇಂದಿನಿಂದಲೇ ಮುನ್ನುಡಿಬರೆಯೋಣವೇ…?
ಜಾಗೃತರಾಗಿ ಚಿಂತಿಸಿ ಒಂದಾಗಿ… ಜೈಭೀಮ್ ಜೈ ಭಾರತ್.