UI ಯುನಿವರ್ಸಲ್ ಇಂಟಲಿಜೆನ್ಸ್ ಮೂವಿಯಲ್ಲಿ ಹೇಳಿದ್ದೇನು?
ಬುದ್ಧಭಾರತದ ನಾಶಕ್ಕೆ ಅಡಿಗಲ್ಲು ಹಾಕಿದವನ್ಯಾರೆಂದು ಆ ಮುಖ ಹಾಗೆ ಬಂದು ಹೀಗೆ ಪಾಸಾಗುತ್ತದೆ ಅಂತರಂಗದ ಕಣ್ಣಿದ್ದವರಿಗೆ ಮಾತ್ರ.

UI ಯುನಿವರ್ಸಲ್ ಇಂಟಲಿಜೆನ್ಸ್ ಮೂವಿಯಲ್ಲಿ ಹೇಳಿದ್ದೇನು?
ಕಲ್ಕಿ ಅಮ್ಮನಿಗೆ ಹೇಳುತ್ತಾ ಹೋಗುತ್ತಾನೆ.
ಈ ನೆಲಕ್ಕೆ ಬುದ್ದ ಬಂದ. ಜಾತಿ ಧರ್ಮ ದೇವರು ಮೌಡ್ಯಗಳಿಲ್ಲದ ನಾಡು ಕಟ್ಟಿದ. ಬುದ್ಧನ ಈ ನೆಲವನ್ನು ಸಹಿಸಲು ನನಗೆ ಆಗಲಿಲ್ಲ. ಅದಕ್ಕೆ ನಾನು ಈ ನೆಲಕ್ಕೆ ಜಾತಿ ಧರ್ಮ ದೇವರುಗಳ ರುಚಿ ಹತ್ತಿಸಿದೆ. ಪರಸ್ಪರ ಬಡಿದಾಡಿ ಸಾಯುವಂತೆ ಮಾಡಿದೆ. ಅಣ್ಣ ಬಸವಣ್ಣ ಬಂದ, ಶಾಂತಿ ಜಪಿಸುತ್ತಾ ಏಸು ಬಂದ. ನನ್ನ ಹುಟ್ಟಿಸಿದ ದೇವರ ಬಗ್ಗೆ ನನಗೆ ಗೌರವವಿದೆ ಆದರೆ ನಾನು ಸೃಷ್ಟಿಸಿದ ದೇವರ ಮೇಲೆ ನಾನು ನಡೆದು ಹೋಗುತ್ತೇನೆ ಎಂದವರನೇಕರು. ನಾನು ಹತ್ತಿಸಿದ ಜಾತಿ ಧರ್ಮ ದೇವರಗಳ ನಶೆಯಲ್ಲಿ ಮುಳುಗಿದ್ದ ಜನ ಬಸವಣ್ಣನನ್ನು ಏಸುವನ್ನು ಬಡಿದು ಕೊಂದರು. ಮೌಢ್ಯ ಬೇಡ ಎಂದವರನ್ನು ಅಟ್ಟಾಡಿಸಿದರು. ಕೊನೆಗೂ ಇಲ್ಲಿ ನಾನೇ ಉಳಿದಿದ್ದೇನೆ, ನಾನು ಹಚ್ಚಿದ ಬೆಂಕಿಯೇ ಉರಿಯುತ್ತಿದೆ. ಅಮ್ಮ ಮೌನವಾಗಿದ್ದಾಳೆ, ಕಲ್ಕಿ ಗಹಗಹಿಸಿ ನುಗುತ್ತಾ ಆರ್ಭಟಿಸುತ್ತಾನೆ. ಬುದ್ಧಭಾರತದ ನಾಶಕ್ಕೆ ಅಡಿಗಲ್ಲು ಹಾಕಿದವನ್ಯಾರೆಂದು ಆ ಮುಖ ಹಾಗೆ ಬಂದು ಹೀಗೆ ಪಾಸಾಗುತ್ತದೆ ಅಂತರಂಗದ ಕಣ್ಣಿದ್ದವರಿಗೆ ಮಾತ್ರ.
ಗಣಿ ಮಾಫಿಯಾ, ಭೂ ಮಾಫಿಯಾ, ಟಿಂಬರ್ ಮಾಫಿಯಾದವರೆಲ್ಲ ತನ್ನ ತಾಯಿಯನ್ನು ಸಾಮೂಹಿಕ ಅತ್ಯಾಚಾರಗೈದರು. ಅತ್ಯಾಚಾರಿಗಳೂ ಸೇರಿದಂತೆ ಅವರ ಅತ್ಯಾಚಾರವನ್ನು ನೋಡಿಯೂ ನೋಡದಂತಿದ್ದವರೆಲ್ಲರನ್ನು ರಕ್ತದಲ್ಲಿ ಮುಳುಗಿಸಿಬಿಡುತ್ತಾನೆ. ಉಸಿರು ಕಟ್ಟಿಸಿ ಸಮಾಧಿ ಮಾಡಿಬಿಡುತ್ತಾನೆ. ಸುಟ್ಟು ಕರಕಲಾಗಿಸಿಬಿಡುತ್ತಾನೆ. ಇವನಲ್ಲಿ ಕರುಣೆ ಅನುಕಂಪ ಕ್ಷಮೆ ಎನ್ನುವುದಕ್ಕೆ ಜಾಗವೇ ಉಳಿದಿರಲ್ಲ. ಈ ಕಲ್ಕಿ ಕೆವಲ ವ್ಯಕ್ತಿಯಾಗಿರುವುದಿಲ್ಲ, ಪ್ರಳಯ, ಭೂಕಂಪ, ಜ್ವಾಲಾಮುಖಿ, ಪ್ರಳಯಾಗ್ನಿ ಆಗಿರುತ್ತಾನೆ.
ಮಠ ಪೀಠಗಳ ಜನ್ಮ ಜಾಲಾಡುತ್ತಾನೆ. ಮೌಡ್ಯ ಮತ್ತು ಅಂಧಕಾರದ ಅಗೆವಿನಲ್ಲಿ ಬೇಯುತ್ತಿರುವ ಪರಾವಲಂಬಿಗಳಿಗೆ ಕಲ್ಕಿಯ ಅಣ್ಣ ಸತ್ಯ ಹೇಳುವ ಮಾತೇನು ಗೊತ್ತಾ?
ನಿಮ್ಮ ಬಂಧನಗಳನ್ನು ನೀವೇ ಕಳಚಿಕೊಳ್ಳಬೇಕು. ನಿಮ್ಮನ್ನು ಕಾಪಾಡಲು ಯಾವನು ಹುಟ್ಟಿ ಬರಲ್ಲ. ಈ ಮಾತನ್ನು ಯಾರು ಯಾರಿಗೆ ಯಾವಾಗ ಹೇಳಿದ್ದರು ಎಂದು ಸಂದರ್ಭ ಸಹಿತವಾಗಿ ನೀವೇ ಹೇಳಿಬಿಡಿ. ಚಿತ್ರದಲ್ಲಿ ಇಂತಹ ಇನ್ನೂ ಹತ್ತಾರು ಕತೆಗಳಿವೆ. ರಾಜಕಾರಣದ ಪ್ರತೀ ಡೈಲಾಗ್, ಕಾಸ್ ತಗಂಡು ಓಟಾಕುವ ಪ್ರತಿಯೊಬ್ಬನ ಎದೆಗೆ ಒದ್ದು ಒದ್ದು ಕೆಡವಿದಂತಿದೆ. ಪೂರ್ತಿ ಕತೆ ಇಲ್ಲೇ ಹೇಳಿದರೆ ಸರಿ ಹೋಗಲ್ಲ. ನಾನು ಕೇವಲ ಹತ್ತು ಪರ್ಸೆಂಟ್ ಹೇಳಿದ್ದೇನೆ. ಉಳಿದಿದ್ದು ನೀವೇ ಚಿತ್ರ ನೋಡಿ ಹೇಳಿ.
ಉಪೇಂದ್ರ ಅವರಿಗೆ ಕಾನ್ಷಿರಾಮ್ ಅವರ ಒಂದು ಮಾತು ಅರ್ಥ ಆಗಬೇಕಿದೆ. ಭಾರತ ಜಾತಿಗಳ ದೇಶ. ಇಲ್ಲಿ ಜಾತಿ ನಾಶ ಅನ್ನೋದು ತುಂಬಾ ಒಳ್ಳೆಯ ಆಶಯವಾಗಿದೆ. ಆದರೆ ವಾಸ್ತವದಲ್ಲಿ ಜಾತಿ ನಾಶ ಇನ್ನು ಸಾಧ್ಯವಿಲ್ಲ. ಬದಲಾಗಿ ಜಾತಿಗಳನ್ನು ಮೇಲೆ ಕೆಳಗೆ ಅಲ್ಲದೆ, ಸಮಾನಾಂತರವಾಗಿ ತರಲು ನಾವು ಪ್ರಯತ್ನಿಸಬಹುದು.
ಚಿತ್ರದ ಮೂಲಕ ತಮ್ಮ ಪಕ್ಷ ಪ್ರಜಾಕೀಯದ ಸಂದೇಶಗಳನ್ನು ಹರಡಲು ಪ್ರಯತ್ನಿಸಿದ್ದಾರೆ, ಭಾರತದ ಪ್ರಜಾಪ್ರಭುತ್ವದ ನೆಲದಲ್ಲಿ ಅದು ಯಾವತ್ತಿಗೂ ಸಾಧ್ಯವಿಲ್ಲ ಎನ್ನುವುದನ್ನು ಚಿತ್ರದ ನಿರ್ದೇಶಕರು ಅರ್ಥ ಮಾಡಿಕೊಳ್ಳಬೇಕು. ದುಡ್ಡು ಕೊಟ್ಟು ಚಿತ್ರ ನೋಡಿದವರ ಮೇಲೇ ತಮ್ಮ ಪಕ್ಷದ ಅಭಿಪ್ರಾಯ ಹೇರಬಾರದಿತ್ತು. ಇದು ನನ್ನ ಪ್ರಾಮಾಣಿಕ ಅನಿಸಿಕೆ.
ಸೂಚನೆ: ವಯಕ್ತಿಕ ಬಿನ್ನಾಭಿಪ್ರಾಯಗಳು ವೈಚಾರಿಕ ಸಂಘರ್ಷಗಳು ಬಹುತ್ವ ಭಾರತದಲ್ಲಿ ಸಾಮಾನ್ಯವಾಗಿದೆ. ಈ ಭಿನ್ನಾಭಿಪ್ರಾಯಗಳು ಪರಸ್ಪರ ಗೌರವದಿಂದ ಕೂಡಿರಬೇಕು. ದ್ವೇಷದ ಸಂತೆ ಬೆಳೆಸುವಂತಿರಬಾರದು. ನೂರಾರು ಜನರ ಹೊಟ್ಟೆಪಾಡಿನ ಶ್ರಮದ ಚಿತ್ರದ ಮೇಲೆ ನಾವು ನಮ್ಮ ವೈಚಾರಿಕ ಸಂಘರ್ಷದ ಕೋಪಗಳನ್ನು ತೋರಿಸಬಾರದು.
ಸಾಧ್ಯವಾದರೆ ಉಪೇಂದ್ರ ಅವರಿಗೆ ಈ ಲೇಖನ ತಲುಪಿಸಿ.
– ಬಿ ಆರ್ ಭಾಸ್ಕರ್ ಪ್ರಸಾದ್.