MLA Chandrappa: ಮಗನಿಗೆ ಟಿಕೆಟ್ ಕೈತಪ್ಪಿದ್ದಕ್ಕೆ ಸಿಡಿದೇಳ್ತಾರಾ ಚಂದ್ರಪ್ಪ? ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ
MLA Chandrappa

ಚಿತ್ರದುರ್ಗದ ಬಿಜೆಪಿ ಟಿಕೆಟ್ ಕಾರಜೋಳಗೆ ಘೋಷಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಗೋ ಬ್ಯಾಕ್ ಅಭಿಯಾನ ಮಾಡಿದ್ದಾರೆ. ನಿನ್ನೆ ಚಿತ್ರದುರ್ಗಕ್ಕೆ ಗೋವಿಂದ ಕಾರಜೋಳ ಬಂದಾಗ ಚಂದ್ರಪ್ಪ ಹಾಗೂ ರಘುಚಂದನ್ ಬೆಂಬಲಿಗರು ಪ್ರತಿಭಟನೆ ಮಾಡಿದ್ದಾರೆ.
ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ (Chitradurga) ಬಿಜೆಪಿಯಲ್ಲಿ ಬಂಡಾಯದ ಕಿಚ್ಚು ಭುಗಿಲೆದ್ದಿದೆ. ಗೋವಿಂದ ಕಾರಜೋಳಗೆ (Govind Makthappa Karjol) ಹೈಕಮಾಂಡ್ ಮಣೆ ಹಾಕಿದ್ದು, ಪುತ್ರ ರಘು ಚಂದನ್ಗೆ ಟಿಕೆಟ್ ಕೈತಪ್ಪಿದಕ್ಕೆ ಶಾಸಕ ಎಂ. ಚಂದ್ರಪ್ಪ (MLA M Chandrappa) ಅಸಮಾಧಾನಗೊಂಡಿದ್ದಾರೆ. ಇದೇ ವಿಚಾರಕ್ಕೆ ರಾಜೀನಾಮೆಗೆ ಮುಂದಾಗಿದ್ದಾರಂತೆ. ಶಾಸಕ ಚಂದ್ರಪ್ಪ ಡಿಸಿಎಂ ಡಿಕೆಶಿ (DK Shivakumar) ಸಂಪರ್ಕದಲ್ಲಿದ್ದಾರೆ ಎನ್ನಲಾಗ್ತಿದೆ. ಇನ್ನು, ಈಗಾಗಲೇ ಚಂದ್ರಪ್ಪ ಅವರು ಸ್ಪೀಕರ್ ಯುಟಿ ಖಾದರ್ (UT Khader) ಅವರಿಗೆ ಸಂಪರ್ಕ ಮಾಡಿದ್ದರೆ ಎನ್ನಲಾಗಿದ್ದು, ಸೋಮವಾರ ಸ್ಪೀಕರ್ ಭೇಟಿಯಾಗಿ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ನಡುವೆ ರಘು ಚಂದನ್ ಅವರು ಪಕ್ಷೇತರರಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.
ಇದರ ನಡುವೆ ಚಂದ್ರಪ್ಪ ವಿರುದ್ಧ ಮಾಜಿ ಶಾಸಕ ತಿಪ್ಪಾರೆಡ್ಡಿ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಈ ಪೋತಪ್ಪ ನಾಯಕನಿಗೆ ಹೆದರಿ ನಾನು ಕೂತಿಲ್ಲ. ಚಂದ್ರಪ್ಪ ಮಗನಿಗೆ ಯಾಕೆ ಟಿಕೆಟ್ ಕೊಡಬೇಕು? ಟಿಕೆಟ್ ಕೊಡಬೇಡಿ ಎಂದು ನಾನೇನು ಹೇಳಿಲ್ಲ. ನಾಯಕರಿಗೆ ನನ್ನ ಅಭಿಪ್ರಾಯ ಹೇಳಿದ್ದೇನೆ ಎಂದಿದ್ದಾರೆ.
ಶಾಸಕ ಚಂದ್ರಪ್ಪ ವಿರುದ್ಧ ತಿಪ್ಪಾರೆಡ್ಡಿ ಕೆಂಡ
ಶಾಸಕ ಚಂದ್ರಪ್ಪ ವಾಗ್ದಾಳಿ ಹಿನ್ನೆಲೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಹಾಲಿ ಶಾಸಕರೊಬ್ಬರು ಮಗನಿಗೆ ಟಿಕೆಟ್ ತಪ್ಪಿದ ಹಿನ್ನೆಲೆ ಕೆಲ ವಿಚಾರ ಮಾತನಾಡಿದ್ದಾರೆ. ರೈತ ನಾಯಕ ಯಡಿಯೂರಪ್ಪ ಅವರ ಬಗ್ಗೆ , ನನ್ನ ಬಗ್ಗೆ ಟೀಕೆ ಮಾಡಿದ್ದಾರೆ. ನಮ್ಮ ಪಕ್ಷದ ಅಗ್ರ ಮಾನ್ಯ ನಾಯಕರು ಯಡಿಯೂರಪ್ಪ ಅವರು, ಅವರಿಗಿಂತ ಅವರ ಮೇಲಿನ ನಾಯಕರು ನನ್ನ ಬಗ್ಗೆ ಏಕವಚನದಲ್ಲೇ ಮಾತನಾಡಿದ್ದಾರೆ. ನಾನು ನೇರವಾಗಿ ಅವನು ಎಂದು ನಾನು ಸಂಬೋಧಿಸುತ್ತೇನೆ. ಅವನು ನಾನು, ಯಡಿಯೂರಪ್ಪ, ವಿಜಯೇಂದ್ರ ತಪ್ಪಿಸಿದ್ದಾರೆ ಎಂದು ಹೇಳುತ್ತಿದ್ದಾನೆ.
1967 ರಲ್ಲಿ ನಾನು MP ಎಲೆಕ್ಷನ್ ನಲ್ಲಿ ಕೆಲಸ ಮಾಡಿದ್ದೇನೆ. 1969 ರಲ್ಲಿ ಪಕ್ಷದ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ. ಆಗ ಅವನು ನಿಕ್ಕರ್ ಹಾಕಿಕೊಂಡು ಚಳ್ಳಕೆರೆ ತಾಲೂಕಿನಲ್ಲಿ ಇದ್ದವನು, 1971 ರಿಂದ 2024 ರವರೆಗೂ ಕೂಡಾ ನಾನು ಕ್ಷೇತ್ರದಲ್ಲಿ ಕೆಲಸ ಮಾಡಿರುವೆ. ನಮ್ಮ ಪಕ್ಷದ ವರುಷ್ಠರು ನನಗೆ ಮಾಹಿತಿ ಕೇಳಿದಾಗ, ಈ ಪೋತಪ್ಪ ನಾಯಕನಿಗೆ ಹೆದರಿ ನಾನು ಕೂತಿಲ್ಲ. ಟಿಕೆಟ್ ಬಗ್ಗೆ ನಾನು ಕಳೆದ 2 ತಿಂಗಳ ಮೇಲೆ ಆಯ್ತು ನಾನು ಯಡಿಯೂರಪ್ಪ ಭೇಟಿ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಟಿಕೆಟ್ ತಪ್ಪಿಸುವಂತಹ ದೊಡ್ಡ ಲೀಡರ್ ನಾನು ಅಲ್ಲ
ಏಕೈಕ ಶಾಸಕ ಎಂದು ಪದೇ ಪದೇ ಹೇಳುತ್ತಿದ್ದಾನೆ ಅವನು, ನಾನು ಹಿಂದೆ ಬಿದ್ದು ಟಿಕೆಟ್ ತಪ್ಪಿಸಿದ್ದೇನೆ ಅನ್ನೋದಕ್ಕೆ ಅವನ ಮಗ ಏನೂ ದೊಡ್ಡ ಲೀಡರ್ ಅಲ್ಲ. ಕೋಲಾರ ಟಿಕೆಟ್ ನೋಡಿ, ನಮ್ಮ ಟಿಕೆಟ್ ತೀರ್ಮಾನ ಮಾಡಿದ್ದಾರೆ. ಎ.ನಾರಾಯಣ ಸ್ವಾಮಿ ಬೇಡ ಎಂದು ಹೇಳಿದ್ದಕ್ಕೆ ಪಕ್ಷದ ಕಾರಜೋಳ ಅವರಿಗೆ ಸೂಚಿಸಿದ್ದಾರೆ. ಆ ಪೋತಪ್ಪ ನಾಯಕನ ಮಗನಿಗೆ ಟಿಕೆಟ್ ಸಿಗುತ್ತೆ ಎಂದು ಏನಿರಲಿಲ್ಲ. ಹೈಕಮಾಂಡ್ ನಾಯಕರು ಹಿರಿಯ ಎಂದು ಅಭಿಪ್ರಾಯ ಕೇಳುವುದು ಸಹಜ. ಕಳೆದ ಬಾರಿ ಮಾತು ಕೊಟ್ಟಿದ್ದರು ಎಂದು ಆ ಮಹಾನ್ ನಾಯಕ ಈಗ ಹೇಳುತ್ತಿದ್ದಾನೆ. ಕಳೆದ ಬಾರಿ ಕೋರ್ ಕಮಿಟಿಯಲ್ಲಿ ಅವನು ಕೂಡಾ ಹಾಜರಿದ್ದ, ಆಗ ಟಿಕೆಟ್ ಗಾಗಿ ಒತ್ತಡ ಇರಲಿಲ್ಲ. ಅವನು ಪ್ರಮಾಣ ಮಾಡಲಿ, ಮಗ ಅರ್ಜಿ ಹಾಕಿದ್ದಾನೆ ಕೊಟ್ಟರೇ ಕೊಡ್ಲಿ, ಬಿಟ್ರೆ ಬಿಡ್ಲಿ ಎಂದಿದ್ದ. ಸಂತೋಷ್ ಜೀ , ಯಡಿಯೂರಪ್ಪ ಯಾವುದೇ ಅಶ್ವಾಸನೆ ಕೊಟ್ಟಿರಲಿಲ್ಲ.
ಕಾರಜೋಳ ವಿರುದ್ಧ ಗೋಬ್ಯಾಕ್! 13 ಮಂದಿ ವಿರುದ್ಧ FIR
ಚಿತ್ರದುರ್ಗದ ಬಿಜೆಪಿ ಟಿಕೆಟ್ ಕಾರಜೋಳಗೆ ಘೋಷಣೆ ಹಿನ್ನೆಲೆಯಲ್ಲಿ ಕಾರ್ಯಕರ್ತರು ಗೋ ಬ್ಯಾಕ್ ಅಭಿಯಾನ ಮಾಡಿದ್ದಾರೆ. ನಿನ್ನೆ ಚಿತ್ರದುರ್ಗಕ್ಕೆ ಗೋವಿಂದ ಕಾರಜೋಳ ಬಂದಾಗ ಚಂದ್ರಪ್ಪ ಹಾಗೂ ರಘುಚಂದನ್ ಬೆಂಬಲಿಗರು ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆ ಮಾಡಿದ್ದ 13 ಮಂದಿ ವಿರುದ್ಧ ದೂರು ದಾಖಲಾಗಿದೆ. ರಸ್ತೆ ತಡೆ ಹಾಗೂ ಪ್ರತಿಭಟನೆ ನಡೆಸಿದ್ದಕ್ಕೆ ಬಡಾವಣೆ ಠಾಣೆಯಲ್ಲಿ FIR ದಾಖಲಾಗಿದೆ.